ADVERTISEMENT

ತೋಟದಲ್ಲೇ ಕೊಳೆಯುತ್ತಿದೆ ವೀಳ್ಯದೆಲೆ

ಖರೀದಿಗೆ ಬಾರದ ವ್ಯಾಪಾರಿ; ಬೆಳೆಗಾರ ಚಿಂತಾಕ್ರಾಂತ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:05 IST
Last Updated 26 ಮೇ 2020, 2:05 IST
ಬೆಟ್ಟದಪುರ ಗ್ರಾಮದ ಸಹೋದರರಾದ ರೈತ  ನಾಗರಾಜೇಗೌಡ ಮತ್ತು ಆಂಜನೇಯ ಗೌಡ ಇರುವ ವೀಳ್ಯದೆಲೆ ಬೆಳೆದು ಲಾಕ್ ಡೌನ್‌ನಿಂದಾಗಿ ಮಾರಾಟ ಮಾಡಲಾಗದೆ  ಸಂಕಷ್ಟಕ್ಕೀಡಾಗಿದ್ದಾರೆ.
ಬೆಟ್ಟದಪುರ ಗ್ರಾಮದ ಸಹೋದರರಾದ ರೈತ  ನಾಗರಾಜೇಗೌಡ ಮತ್ತು ಆಂಜನೇಯ ಗೌಡ ಇರುವ ವೀಳ್ಯದೆಲೆ ಬೆಳೆದು ಲಾಕ್ ಡೌನ್‌ನಿಂದಾಗಿ ಮಾರಾಟ ಮಾಡಲಾಗದೆ  ಸಂಕಷ್ಟಕ್ಕೀಡಾಗಿದ್ದಾರೆ.   

ಬೆಟ್ಟದಪುರ: ವೀಳ್ಯದೆಲೆಯಿಂದ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ಪಟ್ಟಣದ ರೈತ ಸಹೋದರರಾದ ನಾಗರಾಜೇಗೌಡ, ಆಂಜನೇಯಗೌಡ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ಎಕರೆಯಲ್ಲಿ ಬೆಳೆದಿದ್ದ ವೀಳ್ಯದೆಲೆ ತೋಟದಲ್ಲೇ ಕೊಳೆಯುತ್ತಿದೆ. 15 ವರ್ಷಗಳಿಂದಲೂ ಈ ಬೇಸಾಯ ಮಾಡುತ್ತಿದ್ದಾರೆ. ಒಂದು ಸಾವಿರ ಅಡಿಕೆ ಮರಕ್ಕೆ ವೀಳ್ಯದೆಲೆ ಬಳ್ಳಿಯನ್ನು ಹಬ್ಬಿಸಲಾಗಿದೆ. ಇದಕ್ಕೆ ಸುಮಾರು ₹ 3 ಲಕ್ಷದವರೆಗೂ ಖರ್ಚಾಗಿದ್ದು, ಉತ್ತಮ ಇಳುವರಿ ಸಹ ಬಂದಿದೆ. ಆದರೆ ಖರೀದಿ ಮಾಡಿರುವವರು ಬೆಲೆ ಕುಸಿತದಿಂದ ತೋಟಕ್ಕೆ ಬಾರದಾಗಿದ್ದು, ವೀಳ್ಯದೆಲೆ ಕೊಳೆಯುತ್ತಿದೆ.

‘ವೀಳ್ಯದೆಲೆ ತ್ರಾಸದಾಯಕ ಬೆಳೆ. ಮಗುವಿನಂತೆ ಜೋಪಾನ ಮಾಡಿದ್ದೇವೆ. ಕಟಾವಿಗೆ ಬಂದಾಗ ಈ ರೀತಿಯ ಸಮಸ್ಯೆ ಉದ್ಭವಿಸಿದೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು’ ಎಂದು ನಾಗರಾಜೇಗೌಡ ‘ಪ್ರಜಾವಾಣಿ’ ಬಳಿ ತಮ್ಮ ಅಳಲು ತೋಡಿಕೊಂಡರು.

ADVERTISEMENT

‘ವಿಶಿಷ್ಟ ರುಚಿಯಿಂದ ವೀಳ್ಯದೆಲೆ ಪ್ರಸಿದ್ಧಿ ಪಡೆದಿದ್ದು, ಇದನ್ನು ನಂಬಿ ಜೀವನ ನಡೆಸುತ್ತಿರುವ ನಮಗೆ ಇದೀಗ ಸಂಕಷ್ಟ ಎದುರಾಗಿದೆ. ಲಾಕ್‌ಡೌನ್‌ನಿಂದ ಖರೀದಿ ಮಾಡಿರುವ ವ್ಯಾಪಾರಿಗಳು ಎಲೆ ಕೊಳ್ಳಲು ಬಂದಿಲ್ಲ. ಇದರಿಂದ ಗಿಡದಲ್ಲಿಯೇ ವೀಳ್ಯದೆಲೆ ಬಾಡುತ್ತಿರುವುದು ಚಿಂತೆಗೀಡು ಮಾಡಿದೆ’ ಎಂದು ರೈತ ಆಂಜನೇಗೌಡ ಹೇಳಿದರು.

‘ಸೀಝನ್‌ನಲ್ಲಿ ಒಂದು ಪಿಂಡಿಗೆ ₹ 4ಸಾವಿರದಿಂದ ₹ 5 ಸಾವಿರದವರೆಗೂ ಮಾರಾಟವಾಗುತ್ತಿದ್ದ ವೀಳ್ಯದೆಲೆ, ಲಾಕ್‌ಡೌನ್ ಆದಾಗಿನಿಂದಲೂ ಒಂದು ಪಿಂಡಿಗೆ ₹ 300ರಿಂದ ₹ 500ರ ದರದಲ್ಲಿ ಮಾರಾಟವಾಗುತ್ತಿರುವುದು ನುಂಗಲಾರದ ತುತ್ತಾಗಿದೆ. ಕೊಯ್ಲಿನ ಕೂಲಿಯೂ ಗೀಟಲ್ಲ’ ಎಂದು ಮಾರಾಟಗಾರ ರಮೇಶ್ ತಮ್ಮ ಸಮಸ್ಯೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.