ಮೈಸೂರು: ‘ರಾಜ್ಯ ಸರ್ಕಾರವು ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರವನ್ನು ಅತ್ಯುಗ್ರವಾಗಿ ಟೀಕಿಸಿ ಸಂವಿಧಾನಬಾಹಿರ ಕೆಲಸ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಆರೋಪಿಸಿದರು.
‘ಸ್ವಾರ್ಥ ಸಾಧನೆಗಾಗಿ, ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸುಳ್ಳು ಸುದ್ದಿಯನ್ನು ಹರಡಿದೆ’ ಎಂದು ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಸಂಘಪ್ಪ ಎಂಬ ಹೆಸರು ಉಲ್ಲೇಖಿಸುವ ಮೂಲಕ, ಯೋಜನೆಗೆ ಯಾವುದೇ ಸಂಬಂಧವೇ ಇಲ್ಲದಂತಹ ಆರ್‌ಎಸ್‌ಎಸ್ ಸಂಘಟನೆಯನ್ನು ಎಳೆಯುವ ಕೆಲಸವನ್ನೂ ಸರ್ಕಾರ ಮಾಡಿದೆ’ ಎಂದು ಟೀಕಿಸಿದರು.
‘ಕೇಂದ್ರ ರೂಪಿಸಿರುವ ಸಂವಿಧಾನದತ್ತ ಕಾಯ್ದೆಯನ್ನು ವಿರೋಧಿಸುತ್ತಿರುವುದು ಸಂವಿಧಾನ ಬಾಹಿರವಾದುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ಜಾಹೀರಾತು ನೀಡಲಾಗಿದೆ. ರಾಜಕೀಯ ಉದ್ದೇಶದ ಯಾವುದೇ ಜಾಹೀರಾತನ್ನು ಸರ್ಕಾರ ಕೊಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ. ಜನರ ತೆರಿಗೆಯ ಹಣದಲ್ಲಿ ದ್ವೇಷದ ರಾಜಕಾರಣದಲ್ಲಿ ತೊಡಗಿದೆ’ ಎಂದು ವಾಗ್ದಾಳಿ ನಡೆಸಿದರು.
'ವಜಾಗೊಳಿಸಲು ತಕ್ಕುದಾದುದು'
‘ರಾಷ್ಟ್ರಪತಿಯವರು ರಾಜ್ಯ ಸರ್ಕಾರವನ್ನು ವಜಾಗೊಳಿಸಲು ತಕ್ಕುದಾದ ಪ್ರಕರಣ ಇದಾಗಿದೆ. ರಾಜ್ಯಪಾಲರ ವಿರುದ್ಧವೂ ಕಾಂಗ್ರೆಸ್‌ನವರು ಅತಿರೇಕದಿಂದ ನಡೆದುಕೊಂಡಿದ್ದಾರೆ. ಇಂತಹ ಕೃತ್ಯವನ್ನು ಯಾವ ರಾಜ್ಯ ಸರ್ಕಾರವೂ ಮಾಡಿಲ್ಲ’ ಎಂದು ದೂರಿದರು.
‘ವಿಬಿ– ಜಿ ರಾಮ್ ಜಿ’ ಅನುಷ್ಠಾನಕ್ಕೆ ಕ್ರಮ ವಹಿಸದಿರಲಿ. ಆದರೆ, ಕೇಂದ್ರದ ವಿರುದ್ಧ ಅಪಪ್ರಚಾರ ಮಾಡಲು ಸಾಂವಿಧಾನಿಕ ಅಧಿಕಾರ ಇವರಿಗೆ ಇಲ್ಲ’ ಎಂದರು.
‘ಗಾಂಧೀಜಿಯವರ ಹೆಸರು ಬಳಸಿಕೊಂಡು ಹೊಸ ನಾಟಕವನ್ನು ಆಡುತ್ತಿದ್ದಾರೆ. ಗಾಂಧಿ ತತ್ವಕ್ಕೆ ವಿರುದ್ಧವಾಗಿ ಮದ್ಯದ ಅಂಗಡಿಗಳಿಗೆ ಅವಕಾಶ ಕೊಡುತ್ತಲೇ ಇದೆ. ಹೀಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಡಿ ಎಂದು ದೂಷಿಸಿರುವುದು ಖಂಡನೀಯ’ ಎಂದು ಹೇಳಿದರು.
'ಅಭಿವೃದ್ಧಿ ನಡೆಯುತ್ತಿಲ್ಲ'
‘ರಾಜ್ಯ ಸರ್ಕಾರ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿಲ್ಲ. ಸಾಲದ ಕೂಪಕ್ಕೆ ರಾಜ್ಯವನ್ನು ತಳ್ಳಿದೆ. ನಿತ್ಯವೂ ಒಂದಿಲ್ಲೊಂದು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಲೇ ಇವೆ. ಈ ಸರ್ಕಾರದ ವಿರುದ್ಧ ರಾಷ್ಟ್ರಪತಿಯವರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ನಗರ ಜಿಲ್ಲಾ ಘಟಕದ ವಕ್ತಾರ ಮೋಹನ್ ಮಾತನಾಡಿ, ‘ಮೈಸೂರಿನಲ್ಲಿ ಹಿಂದೆ ಮಹಾರಾಷ್ಟ್ರ ಪೊಲೀಸರು ಮಾದಕವಸ್ತುಗಳ ಕಾರ್ಖಾನೆಯನ್ನೇ ಪತ್ತೆ ಹಚ್ಚಿದ್ದರು. ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿತ್ತು. ಈಗ, ಬುಧವಾರ ನವದೆಹಲಿ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಅಲ್ಲಿ ಮಾದಕವಸ್ತು ಸಿಕ್ಕಿಲ್ಲವೆಂದು ಹೇಳಲು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಯಾರು? ಹೇಳಬೇಕಾದವರು ಕಾರ್ಯಾಚರಣೆ ನಡೆಸಿದ ನವದೆಹಲಿ ಪೊಲೀಸರಲ್ಲವೇ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಹಾಳಾಗಿದೆ. ಮುಖ್ಯಮಂತ್ರಿ ತವರಿನಲ್ಲೇ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ಇಲ್ಲಿನ ಪೊಲೀಸರೇಕೆ ಕಣ್ಮುಚ್ಚಿ ಕುಳಿತಿದ್ದಾರೆ?’ ಎಂದು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಕೇಳಿದರು.
ಪಕ್ಷದ ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಿ.ಕೆ. ರುದ್ರಮೂರ್ತಿ, ಸೋಮಸುಂದರ್, ಮಾಧ್ಯಮ ಪ್ರಮುಖ ಮಹೇಶ್‌ರಾಜೇ ಅರಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.