ಮೈಸೂರು: ‘ಕೊಟ್ಟ ಭರವಸೆಯನ್ನೆಲ್ಲ ಈಡೇರಿಸಿದ್ದೇವೆ ಎನ್ನುವ ಸಿದ್ದರಾಮಯ್ಯನವರೇ, ಭ್ರಷ್ಟಾಚಾರ, ಬೆಲೆ ಏರಿಕೆ, ರಾಜ್ಯದ ಸಾಲ ಏರಿಕೆಯೇ ನಿಮ್ಮ ಭರವಸೆ ಆಗಿತ್ತಾ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಚಾರ್ಜ್‌ಶೀಟ್’ ಬಿಡುಗಡೆ ಮಾಡಿ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ 64 ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆ ಆಗಿದೆ. ಹಾಲಿನಿಂದ ಆಲ್ಕೋಹಾಲ್‌ವರೆಗೆ ಎಲ್ಲದರ ದರ ಏರಿಸಿದ್ದೇ ಸರ್ಕಾರದ ಸಾಧನೆ’ ಎಂದು ಲೇವಡಿ ಮಾಡಿದರು.
‘ಯುಪಿಎ ಅವಧಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ತೆರಿಗೆ ಸಂಗ್ರಹದ ಶೇ 32ರನ್ನು ಪಾಲನ್ನು ವಾಪಸ್ ನೀಡುತ್ತಿತ್ತು. ಈಗ ಈ ಪ್ರಮಾಣವು ಶೇ 42ಕ್ಕೆ ಏರಿದೆ. ಉಳಿದ ಹಣವನ್ನೂ ವಿವಿಧ ಯೋಜನೆಗಳ ರೂಪದಲ್ಲಿ ಹಿಂತಿರುಗಿಸುತ್ತದೆ. ಹೀಗಿದ್ದೂ ಕೇಂದ್ರವು ತೆರಿಗೆ ಬಾಕಿ ನೀಡಿಲ್ಲ ಎಂದು ಜನರಿಗೆ ಸುಳ್ಳು ಹೇಳುತ್ತ ಸಿದ್ದರಾಮಯ್ಯ ತಮ್ಮ ತಪ್ಪನ್ನು ಮುಚ್ಚಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಕೇರಳದಲ್ಲಿ ₹1,800 ಬೆಲೆ ಇರುವ ವಿದ್ಯುತ್ ಸ್ಮಾರ್ಟ್ ಮೀಟರ್ ಅನ್ನು ಕರ್ನಾಟಕ ಸರ್ಕಾರ ₹4 ಸಾವಿರದಿಂದ ₹5 ಸಾವಿರ ಕೊಟ್ಟು ಖರೀದಿಸುತ್ತಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ. ರೈತರು ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಲು ಇದ್ದ ಶುಲ್ಕವನ್ನು ₹30 ಸಾವಿರದಿಂದ ₹3 ಲಕ್ಷಕ್ಕೆ ಏರಿಸಿದ್ದು, ಪ್ರತಿ ವಿದ್ಯುತ್ ಕಂಬಕ್ಕೆ ₹15 ಸಾವಿರ ಕಟ್ಟಬೇಕಿದೆ. ಈ ಪರಿಸ್ಥಿತಿ ತಂದಿಟ್ಟದ್ದೇ ಸರ್ಕಾರದ ಸಾಧನೆಯೇ’ ಎಂದು ಪ್ರಶ್ನಿಸಿದರು.
‘ಬೆಂಗಳೂರು ಮುಳುಗಿರುವಾಗ ವಿಜಯನಗರದಲ್ಲಿ ಕಾಂಗ್ರೆಸಿಗರು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರು. ಜನರ ತೆರಿಗೆ ಹಣದಲ್ಲಿ ಸಮಾವೇಶ ನಡೆದಿದೆ. ಅದು ಸರ್ಕಾರದ ಸಮಾವೇಶವೋ ಅಥವಾ ಕಾಂಗ್ರೆಸ್ ಸಮಾವೇಶವೋ ಎಂಬುದನ್ನು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಅನಿಲ್ ಥಾಮಸ್, ಪ್ರಕೋಷ್ಠಗಳ ರಾಜ್ಯಸಂಚಾಲಕ ಎನ್.ವೈ. ಫಣೀಶ್, ಮುಖಂಡರಾದ ಸಂದೇಶ್ ಸ್ವಾಮಿ, ಮೋಹನ್, ಬಿ.ಎಂ. ರಘು, ಕೇಬಲ್ ಮಹೇಶ್, ರುದ್ರಮೂರ್ತಿ, ಮಹೇಶ್ ರಾಜೇ ಅರಸ್, ಬಿ.ಎಂ. ಸಂತೋಷ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.