ADVERTISEMENT

ದಿವ್ಯತ್ರಯರ ವೈಭವದ ರಥೋತ್ಸವ

ರಾಮಕೃಷ್ಣ ವೃತ್ತದ ಬಳಿ ಭಕ್ತರ ಎಲ್ಲೆ ಮೀರಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 12:06 IST
Last Updated 19 ಫೆಬ್ರುವರಿ 2020, 12:06 IST
ಕಾರ್ಯಕ್ರಮವನ್ನು ಮುಕ್ತಿದಾನಂದಜಿ ಮಹಾರಾಜ್‌ ಉದ್ಘಾಟಿಸಿದರು. ವಿಜಯಾನಂದತೀರ್ಥ ಸ್ವಾಮೀಜಿ, ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್, ಚಕ್ರವರ್ತಿ ಸೂಲಿಬೆಲೆ, ಮಾದೇಗೌಡ, ಎಸ್‌.ಪಿ.ಯೋಗಣ್ಣ ಮತ್ತಿತರರು ಇದ್ದಾರೆ
ಕಾರ್ಯಕ್ರಮವನ್ನು ಮುಕ್ತಿದಾನಂದಜಿ ಮಹಾರಾಜ್‌ ಉದ್ಘಾಟಿಸಿದರು. ವಿಜಯಾನಂದತೀರ್ಥ ಸ್ವಾಮೀಜಿ, ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್, ಚಕ್ರವರ್ತಿ ಸೂಲಿಬೆಲೆ, ಮಾದೇಗೌಡ, ಎಸ್‌.ಪಿ.ಯೋಗಣ್ಣ ಮತ್ತಿತರರು ಇದ್ದಾರೆ   

ಮೈಸೂರು: ಭಕ್ತರ ಎಲ್ಲೆ ಮೀರಿದ ಉತ್ಸಾಹ, ಮಕ್ಕಳ ನೃತ್ಯದ ಸೊಬಗು, ಕಲಾತಂಡಗಳ ಪ್ರದರ್ಶನದ ನಡುವೆ ಮಂಗಳವಾರ ದಿವ್ಯತ್ರಯರಾದ ರಾಮಕೃಷ್ಣ ಪರಮಹಂಸ, ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದ ಅವರ ರಥೋತ್ಸವ ವೈಭವದಿಂದ ನೆರವೇರಿತು.

ರಾಮಕೃಷ್ಣ ಆಶ್ರಮ, ರಾಮಕೃಷ್ಣ ಸೇವಾ ಸಂಘ, ರಾಮಕೃಷ್ಣ ಬಳಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಮಕೃಷ್ಣ ಪರಮಹಂಸರ ಜಯಂತಿ ಹಾಗೂ ದಿವ್ಯತ್ರಯರ ರಥೋತ್ಸವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ರಾಮಕೃಷ್ಣನಗರದ ರಾಮಕೃಷ್ಣ ವೃತ್ತದ ಬಳಿ ಮಂಗಳವಾರ ಇಳಿಸಂಜೆಯಲ್ಲಿ ಹಬ್ಬದ ವಾತಾವರಣ ಕಂಡುಬಂತು.

ವಿವೇಕಾನಂದ ನಗರದ ವಿವೇಕಾನಂದ ವೃತ್ತದಿಂದ ಹೊರಟ ವಿವೇಕಾನಂದ ರಥ ಹಾಗೂ ಶಾರದಾದೇವಿ ನಗರದ ಶಾರದಾದೇವಿ ವೃತ್ತದಿಂದ ಹೊರಟ ಶಾರದಾದೇವಿ ರಥಗಳು ಪ್ರಮುಖ ಬೀದಿಗಳಲ್ಲಿ ಸಾಗಿ ಸಂಜೆ 6ರ ವೇಳೆಗೆ ರಾಮಕೃಷ್ಣ ವೃತ್ತ ತಲುಪಿದವು. ಆ ಬಳಿಕ ಶಾರದಾದೇವಿ, ವಿವೇಕಾನಂದ ಮತ್ತು ರಾಮಕೃಷ್ಣ ರಥೋತ್ಸವ ನೆರವೇರಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿಗಳು ಮತ್ತು ಗಣ್ಯರು ರಾಮಕೃಷ್ಣರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ADVERTISEMENT

ಗಣಪತಿ ಸಚ್ಚಿದಾನಂದ ಆಶ್ರಮದ ವಿಜಯಾನಂದತೀರ್ಥ ಸ್ವಾಮೀಜಿ ಮಾತನಾಡಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಶಾರದಾದೇವಿ ಅವರು ಮನುಕುಲದ ಮಾರ್ಗದರ್ಶಕರು. ಪರಮಾತ್ಮನೇ ದಿವ್ಯತ್ರಯರಾಗಿ ಬಂದಿದ್ದಾನೆಯೇ ಎಂಬ ಭಾವನೆ ಮೂಡುತ್ತದೆ ಎಂದರು.

ರಾಮಕೃಷ್ಣ ಅವರು ಗುರುಪರಂಪರೆಯನ್ನು ತೋರಿಸಿಕೊಟ್ಟರು. ವಿವೇಕಾನಂದ ಅವರು ಯುವಕರಿಗೆ ಪ್ರೇರಕ ಶಕ್ತಿ ಎನಿಸಿದ್ದಾರೆ. ಮಕ್ಕಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಹೆತ್ತವರು ದಿವ್ಯತ್ರಯರ ಸಂದೇಶಗಳನ್ನು ಅವರಿಗೆ ಕಲಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.

‘ಯುಗಾವತಾರ ಶ್ರೀರಾಮಕೃಷ್ಣ’ ಕುರಿತು ಉಪನ್ಯಾಸ ನೀಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕೋಲ್ಕತ್ತವನ್ನು ಹೊರತುಪಡಿಸಿದರೆ ರಾಮಕೃಷ್ಣರ ಜಯಂತಿಯನ್ನು ಇಷ್ಟು ವಿಜೃಂಭಣೆಯಿಂದ ಆಚರಿಸುವುದು ಮೈಸೂರಿನಲ್ಲಿ ಮಾತ್ರ. ಇದು ಸಂತಸದ ವಿಷಯ ಎಂದರು.

ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜಿ ಮಹಾರಾಜ್‌ ಸಾನ್ನಿಧ್ಯ ವಹಿಸಿದ್ದರು. ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಶಾಂತಿ ವ್ರತಾನಂದ ಸ್ವಾಮೀಜಿ, ವಿಧಾನಪರಿಷತ್‌ ಮಾಜಿ ಸದಸ್ಯ ಮಾದೇಗೌಡ, ಪಾಲಿಕೆ ಸದಸ್ಯರಾದ ಲಕ್ಷ್ಮಿ ಕಿರಣ್ ಮಾದೇಗೌಡ, ಶರತ್‌ ಕುಮಾರ್‌, ನಿರ್ಮಲಾ ಹರೀಶ್, ಸುನಂದಾ ಪಾಲನೇತ್ರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.