ನುವಾರು
ಮೈಸೂರು: ಜಿಲ್ಲೆಯಲ್ಲಿ ನಡೆದಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯ ಶೇ 85ರಷ್ಟು ಪೂರ್ಣ ಗೊಂಡಿದ್ದು, ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ನಿಖರ ಮಾಹಿತಿ ಕಲೆಹಾಕುವ ಕಾರ್ಯ ಭರದಿಂದ ಸಾಗಿದೆ.
‘ಈ ಮೊದಲಿನ ಗಣತಿಗಳಲ್ಲಿ ಸಂದರ್ಶಕರು ಮನೆಮನೆಗೆ ತೆರಳಿ ರೈತರು ನೀಡಿದ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಅದನ್ನು ಕ್ರೋಡೀಕರಿಸಿ ಸಮಗ್ರ ವರದಿ ಸಿದ್ಧಪಡಿಸುವಲ್ಲಿ ತಿಂಗಳುಗಳೇ ಹಿಡಿಯುತ್ತಿತ್ತು. ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಅನ್ನು ಗಣತಿಗೆ ಬಳಸುತ್ತಿದ್ದು, ಕೇಂದ್ರ ಪಶುಸಂಗೋಪನಾ ಇಲಾಖೆಯು ಈ ಗಣತಿಗೆ ‘21ನೇ ಲೈವ್ ಸ್ಟಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿದೆ. ಇದರಿಂದ ಸ್ಥಳದಲ್ಲೇ ಕ್ಷಣ ಮಾತ್ರದಲ್ಲಿ ಎಲ್ಲ ಮಾಹಿತಿ ಗಳನ್ನು ದಾಖಲಿಸಲಾಗುತ್ತಿದೆ. ಗಣತಿ ಪೂರ್ಣಗೊಂಡ ಮರುದಿನವೇ ಸಮಗ್ರ ಮಾಹಿತಿ ಸಿಗಲಿದೆ’ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಇಲಾಖೆಯ 230 ಸಿಬ್ಬಂದಿ ಈ ಗಣತಿಯಲ್ಲಿ ತೊಡಗಿದ್ದಾರೆ. 77 ಮೇಲ್ವಿಚಾರಕರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಮನೆಯ ಸಮೀಪವೇ ಆನ್‌ಲೈನ್‌ನಲ್ಲಿ ಗಣತಿ ಅಂಶಗಳನ್ನು ಸೇರಿಸುವುದರಿಂದ ನಿಖರ ಮಾಹಿತಿ ದೊರೆಯಲಿದೆ’ ಎಂದು ತಿಳಿಸಿದರು.
ಐದು ವರ್ಷಗಳ ಬಳಿಕ ಗಣತಿ: ದೇಶದಲ್ಲಿ ಏಕಕಾಲಕ್ಕೆ ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆದಿದೆ. ಈವರೆಗೆ 20 ಗಣತಿಗಳು ಪೂರ್ಣಗೊಂಡಿವೆ. 2019ರಲ್ಲಿ ದೇಶದಲ್ಲಿ ಕಡೆಯ ಬಾರಿಗೆ ಜಾನುವಾರು ಗಣತಿ ನಡೆದಿತ್ತು. ಅದಾದ ಐದು ವರ್ಷಗಳ ಬಳಿಕ ಮತ್ತೆ ಗಣತಿ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿನ 7.20 ಲಕ್ಷಕ್ಕೂ ಅಧಿಕ ಮನೆಗಳಲ್ಲಿನ ಜಾನುವಾರುಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು, ಲಸಿಕೆ ಮೊದಲಾದ ಕಾರ್ಯಕ್ರಮಗಳಿಗೆ ಈ ಗಣತಿ ಅನುಕೂಲ ಆಗಲಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಣತಿ ಆರಂಭಗೊಂಡಿದ್ದು, ಈ ವರ್ಷ ಫೆಬ್ರುವರಿ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ, ಕಾಲುಬಾಯಿ ಜ್ವರ ಲಸಿಕೆ ಮೊದಲಾದ ಕಾರಣಗಳಿಗೆ ಗಣತಿಯಲ್ಲಿ ವಿಳಂಬವಾಗಿದ್ದು, ಕೇಂದ್ರ ಸರ್ಕಾರ ಅವಧಿಯಲ್ಲಿ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದೆ.
ಸದ್ಯಕ್ಕಿಲ್ಲ ಮೇವಿನ ಕೊರತೆ
‘ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಫಲಪ್ರದವಾಗಿದ್ದು, ಭತ್ತದ ಕೃಷಿಯೂ ಉತ್ತಮವಾಗಿದೆ. ಹೀಗಾಗಿ ಸದ್ಯಕ್ಕೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮೇವಿನ ಕೊರತೆ ಆಗದು’ ಎಂದು ನಾಗರಾಜು ಮಾಹಿತಿ ನೀಡಿದರು.
‘ಮುಂದಿನ 54 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ನೀರಾವರಿ ಸೌಲಭ್ಯ ಇರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಏಪ್ರಿಲ್ ಅಂತ್ಯ ಹಾಗೂ ಮೇನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದ್ದು, ಹಸಿಮೇವು ಉತ್ಪಾದನೆಯೂ ಆಗಲಿದೆ. ಮೇವಿನ ಲಭ್ಯತೆ ಇರುವ ಕಾರಣ ಅಂತರ ಜಿಲ್ಲಾ ಮೇವು ಸಾಗಣೆಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ’ ಎಂದರು.
ಯಾವುದೆಲ್ಲ ಜಾನುವಾರು?
ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರೀಚ್ ಪಕ್ಷಿಗಳ ಮಾಹಿತಿ ಪಡೆಯಲಾಗುತ್ತದೆ. ಬಿಡಾಡಿ ದನ, ನಾಯಿಗಳ ಮಾಹಿತಿಯನ್ನು ಗಣತಿಯಲ್ಲಿ ಸೇರಿಸಲಾಗುತ್ತದೆ. ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಹೆಚ್ಚು ದನಗಳಿದ್ದರೆ, 1,000ಕ್ಕಿಂತ ಹೆಚ್ಚು ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆ ಮಾಡುತ್ತಿದ್ದರೆ ಅದನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲಾಗುತ್ತದೆ.
ಗಣತಿ ಕಾರ್ಯದಲ್ಲಿ ಯಾವ ಯಾವ ತಳಿಯ ಜಾನುವಾರುಗಳು, ಪ್ರಾಣಿಗಳು, ಕುಕ್ಕಟಗಳು ಎಷ್ಟಿವೆ? ಯಾವ ವಯಸ್ಸಿನವು ಇವೆ? ಎಷ್ಟು ರೈತರು? ಯಾವ ವರ್ಗದ ರೈತರು, ಹೈನುಗಾರರು? ಎಷ್ಟು ಮಹಿಳೆಯರು ಪಶುಪಾಲನೆಯಲ್ಲಿ ತೊಡಗಿದ್ದಾರೆ ಮೊದಲಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.