ADVERTISEMENT

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು–ಕಸ ಸುರಿದರೆ ಕ್ರಮ

ರಿಂಗ್‌ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ: ನ.28ರೊಳಗೆ ವಿಲೇವಾರಿ: ಎಚ್‌.ವಿ.ರಾಜೀವ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:33 IST
Last Updated 22 ನವೆಂಬರ್ 2020, 4:33 IST

ಮೈಸೂರು: ಮೈಸೂರು ನಗರದ ರಿಂಗ್‌ ರಸ್ತೆ ಇಕ್ಕೆಲಗಳಲ್ಲಿ ಇನ್ನುಮುಂದೆ ಕಟ್ಟಡ ತ್ಯಾಜ್ಯ ಸುರಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಎಚ್‌.ವಿ.ರಾಜೀವ್‌ ಎಚ್ಚರಿಕೆ ನೀಡಿದರು.

‘ಈ ಸಂಬಂಧ ಈ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗುವುದು. ಅಲ್ಲದೇ, ಯಾರಾದರೂ ಕಸ ಸುರಿಯು ವುದು ಕಂಡುಬಂದರೆ ಸಾರ್ವಜನಿಕರು ಚಿತ್ರ ತೆಗೆದು 8884000750 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿ ದೂರು ನೀಡಬಹುದು. ವಾಹನಗಳನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುವುದು. ಪ್ರಾಧಿಕಾರ ವತಿಯಿಂದ ಜಾಗೃತದಳ ಕೂಡ ರಚಿಸಲಾಗುವುದು. ಅಲ್ಲದೇ, ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಜೊತೆ ಸಭೆ ನಡೆಸಲಾಗುವುದು’ ಎಂದು ಶನಿವಾರ ಮಾಹಿತಿ ನೀಡಿದರು.

‘ರಿಂಗ್‌ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 30 ಕಡೆ ಕಟ್ಟಡ ಹಾಗೂ ಇನ್ನಿತರ ತ್ಯಾಜ್ಯವನ್ನು ಲಾರಿಯಲ್ಲಿ ತಂದು ಸುರಿಯುತ್ತಿರುವುದು ಕಂಡುಬಂದಿದೆ. ಈ ಪೈಕಿ 13 ಸ್ಥಳಗಳನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ. ಪ್ರಾಧಿಕಾರವೇ ನ.28ರೊಳಗೆ ಒಂದು ಬಾರಿ ತ್ಯಾಜ್ಯವನ್ನು ತೆರವುಗೊಳಿಸಲಿದೆ’ ಎಂದರು.

ADVERTISEMENT

ಏಕ ನಿವೇಶನ: ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ ಕಲ್ಪಿಸಿರುವುದರ ಬಗ್ಗೆ ಸಕ್ಷಮ ಪ್ರಾಧಿಕಾರಗಳಿಂದ ದೃಢೀಕರಣ ಪತ್ರ ಹಾಜರುಪಡಿಸಿದರೆ ಮಾತ್ರ ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ನಕ್ಷೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

‘ನಕ್ಷೆ ಅನುಮೋದನೆ ಬಯಸುವವರು ಮೂಲಸೌಕರ್ಯದ ಬಗ್ಗೆ ದೃಢೀಕರಣ ಪತ್ರ ಕಡ್ಡಾಯ ಮಾಡಲಾಗಿದೆ. ಒಳಚರಂಡಿಯನ್ನು ಮುಖ್ಯ ಚರಂಡಿಗೆ ಲಿಂಕೇಜ್ ಮಾಡಿರುವ ಬಗ್ಗೆ ಪಾಲಿಕೆ ದೃಢೀಕರಣ ಪತ್ರ ಪಡೆಯುವುದು ಕೂಡ ಕಡ್ಡಾಯ. ಏಕ ನಿವೇಶನ ಅನುಮೋದನೆ ಬಳಿಕ ನಿವೇಶನ ವಿಭಜನೆ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದರು.

ಶೇ 50:50 ಅನುಪಾತದಲ್ಲಿ ರೈತರಿಂದ ಜಮೀನು ಪಡೆದು ಬಡಾವಣೆ ನಿರ್ಮಾಣ ವಿಚಾರದಲ್ಲಿ ರೈತರಿಗೆ ಮುಂಗಡವಾಗಿ ₹ 10 ಲಕ್ಷ ಕೊಡಲು ನಿರ್ಧರಿಸಲಾಗಿದೆ. ಈ ತೀರ್ಮಾನದ ಬಳಿಕ ಹೆಚ್ಚಿನ ರೈತರು ತಮ್ಮ ಜಮೀನು ನೀಡಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.

2 ತಿಂಗಳಲ್ಲಿ ಬೋರ್‌ವೆಲ್‌: ಮುಡಾ ನಿರ್ಮಿಸಿರುವ ನೂತನ ಬಡಾವಣೆ ಆರ್‌.ಟಿ.ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಎರಡು ತಿಂಗಳಲ್ಲಿ ಬೋರ್‌ವೆಲ್‌ ಕೊರೆಸಲಾಗುವುದು. ನೂತನ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.