ADVERTISEMENT

ಸಿಎಫ್‌ಟಿಆರ್‌ಐನಲ್ಲಿ ಕನ್ನಡದ ಕಲರವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:12 IST
Last Updated 7 ನವೆಂಬರ್ 2019, 10:12 IST
ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಹಬ್ಬದಲ್ಲಿ ಕನ್ನಡ ಸಹೃದಯ ಬಳಗದ ಸಂಸ್ಥಾಪಕ ಸದಸ್ಯರಾದ ಎಂ.ಎಲ್.ಶ್ರೀನಿವಾಸರಾವ್, ಲೀಲಾ ವಿಜಯಕುಮಾರ್, ಹರಿಪ್ರಸಾದ್, ಎ.ಆರ್.ವರದರಾಜನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು
ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಹಬ್ಬದಲ್ಲಿ ಕನ್ನಡ ಸಹೃದಯ ಬಳಗದ ಸಂಸ್ಥಾಪಕ ಸದಸ್ಯರಾದ ಎಂ.ಎಲ್.ಶ್ರೀನಿವಾಸರಾವ್, ಲೀಲಾ ವಿಜಯಕುಮಾರ್, ಹರಿಪ್ರಸಾದ್, ಎ.ಆರ್.ವರದರಾಜನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು   

ಮೈಸೂರು: ಕೇಂದ್ರದ ಸಿಎಫ್‌ಟಿಆರ್‌ಐ ಸಂಸ್ಥೆ ಆವರಣದಲ್ಲಿ ಬುಧವಾರ ಕನ್ನಡದ ಕಲರವ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಕನ್ನಡ ಸಹೃದಯ ಬಳಗದ ಕಚೇರಿಯಲ್ಲಿ ನಾಡು–ನುಡಿಗಾಗಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರ ಚುಕ್ಕಿಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು.

ಕನ್ನಡ ಸಹೃದಯ ಬಳಗದ ಕಚೇರಿಯ ಆವರಣ ಕನ್ನಡದ ಕಂಪಿನಿಂದ ತುಂಬಿತ್ತು. ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದವು. ಚೆಲುವಾಂಬ ಅರಮನೆಯ ಪ್ರವೇಶದ್ವಾರದಲ್ಲಿ ಬಣ್ಣದ ರಂಗೋಲಿಯ ಚಿತ್ತಾರ ಪ್ರಮುಖವಾಗಿ ಗಮನ ಸೆಳೆಯಿತು.

ಸಿಎಫ್‌ಟಿಆರ್‌ಐನ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಗರಿಷ್ಠ ಅಂಕ ಪಡೆದ ಎಸ್‌.ಧನುಷ್‌, ಬಿ.ಇಂಚರಾ, ಎಸ್‌.ಅಶೋಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ ನೃಪತುಂಗ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮೂವರು ಬಡ ವಿದ್ಯಾರ್ಥಿಗಳನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಲಾಯಿತು. ಇದಕ್ಕೆ ತಗುಲುವ ವೆಚ್ಚವನ್ನು ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ್‌ ಅವರಿಗೆ ಚೆಕ್ ಮೂಲಕ ನೀಡಲಾಯಿತು.

ADVERTISEMENT

ಕನ್ನಡ ಸಹೃದಯ ಬಳಗದ ಸಂಸ್ಥಾಪಕ ಸದಸ್ಯರಾದ ಹರಿಪ್ರಸಾದ್, ಕೆ.ವಿ.ಕೃಷ್ಣಮೂರ್ತಿ, ಲೀಲಾ ವಿಜಯಕುಮಾರ್, ಎ.ಆರ್.ವರದರಾಜನ್, ಮೋಹನದಾಸ್, ಎಂ.ಎಲ್.ಶ್ರೀನಿವಾಸರಾವ್, ಸುರೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಚುಕ್ಕಿಚಿತ್ರ ಕಲಾವಿದ ಮೋಹನ್ ವೆರ್ಣೇಕರ್ ಅವರನ್ನು ಗೌರವಿಸಲಾಯಿತು.

ಡೊಳ್ಳುಕುಣಿತ ಮನ ಸೆಳೆಯಿತು. ಸಿಎಫ್‌ಟಿಆರ್‌ಐನ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವರಾವ್, ಕನ್ನಡ ಸಹೃದಯ ಬಳಗದ ಅಧ್ಯಕ್ಷ ರಂಗಧಾಮಯ್ಯ, ಉಪಾಧ್ಯಕ್ಷ ಡಾ.ಕೆ.ವೆಂಕಟೇಶ್‌ಮೂರ್ತಿ, ಪ್ರಧಾನ ಕಾರ್ಯದರ್ಶಿ ಡಾ.ಆರ್.ಚೇತನಾ ಉಪಸ್ಥಿತರಿದ್ದರು.

ಕನ್ನಡ ಸಮೃದ್ಧವಾಗಲಿ; ಕೃಷ್ಣೇಗೌಡ

‘ವಿಜ್ಞಾನ, ತಂತ್ರಜ್ಞಾನ, ಬ್ಯಾಂಕಿಂಗ್, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಕನ್ನಡದ ಬಳಕೆಯಾದಾಗ ಮಾತ್ರ ಭಾಷೆ ಉಳಿದು ಸಮೃದ್ಧವಾಗಲಿದೆ. ಸರ್ಕಾರವೂ ಇದಕ್ಕೆ ಮಾನ–ಮರ್ಯಾದೆಯಿಂದ ಸ್ಪಂದಿಸಬೇಕಿದೆ’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

‘ಕನ್ನಡದ ಶಕ್ತಿ–ಸಾಮರ್ಥ್ಯ ಅಗಾಧವಾದುದು. ಒಮ್ಮೆ ಅದರತ್ತ ಕಣ್ಣಾಡಿಸಿದರೆ ಮೈಮನ ರೋಮಾಂಚನಗೊಳ್ಳಲಿದೆ. ಫ್ರೆಂಚರು, ಜರ್ಮನ್ನರು ತಮ್ಮ ಭಾಷೆಗಳನ್ನು ಬೆಳೆಸಿಕೊಂಡ ಪರಿಯೇ ನಾವು ಕನ್ನಡವನ್ನು ಬೆಳೆಸಬೇಕಿದೆ’ ಎಂದರು.

‘ಪ್ರಪಂಚದ ಚಿಕ್ಕ ಭಾಷೆಯಾಗಿದ್ದ ಇಂಗ್ಲಿಷ್ ಐದು ಶತಮಾನದ ಅವಧಿಯಲ್ಲೇ ಜಗತ್ತಿನ ಜ್ಞಾನದ ಕಿಟಕಿಯಾಯ್ತು. ಇದು ಅದರ ತಾಕತ್ತು. ಅಗಾಧ ಶಬ್ದ ಭಂಡಾರ ಹೊಂದಿರುವ ಸಮುದ್ರ ಭಾಷೆ ನಮ್ಮದು. ಆದರೆ ಆಧುನಿಕ ಶಿಕ್ಷಣ ಪದ್ಧತಿಯ ಸುಳಿಗೆ ಸಿಲುಕಿ ನಾವು ಅತ್ತ ಇಂಗ್ಲಿಷ್‌ ಕಲಿಯಲಾಗದೆ, ಇತ್ತ ಕನ್ನಡವೂ ಸರಿಯಾಗಿ ಬಾರದೆ ಎಡಬಿಡಂಗಿಗಳಂತಾಗಿದ್ದೇವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.