ADVERTISEMENT

ಇಬ್ಬರು ಸರಗಳ್ಳರ ಬಂಧನ

₹ 8.35 ಲಕ್ಷ ಮೌಲ್ಯದ ಚಿನ್ನದ ಸರ ವಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:59 IST
Last Updated 14 ಜುಲೈ 2020, 17:59 IST

ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಕುವೆಂಪುನಗರ ಠಾಣೆ ಪೊಲೀಸರು ₹ 8.35 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಸರಗಳ್ಳತನಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀರಂಗಪಟ್ಟಣದ ತಾಲ್ಲೂಕಿನ ಹನುಮಂತನಗರ ಗ್ರಾಮದ ಎಚ್.ಡಿ.ಶಶಿಧರ್ (24), ಕಿರಂಗೂರು ಗ್ರಾಮದ ಕೆ.ಗುರು ಅವರು ಬಂಧಿತ ಆರೋಪಿಗಳು.

ಇವರು ಜುಲೈ 10ರಂದು ಬೆಳಿಗ್ಗೆ ನಂಬರ್ ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ಕುವೆಂಪುನಗರದಲ್ಲಿ 3 ಹಾಗೂ ವಿಜಯನಗರದಲ್ಲಿ 1 ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಡಿಸಿಪಿ ಪ್ರಕಾಶ್‌ಗೌಡ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ರಾಜು ಅವರು ಕಾರ್ಯಾಚರಣೆ ನಡೆಸಿದ್ದರು. ತಂಡದಲ್ಲಿ ಪಿಎಸ್‌ಐ ಇರ್ಷಾದ್, ಎಎಸ್‌ಐ ಕಾಂತರಾಜು, ಧನಂಜಯ್, ಮುರಳಿಗೌಡ, ಸಿಬ್ಬಂದಿಯಾದ ಮಂಜುನಾಥ, ಭಗತ್, ಮಹದೇವ, ಯೋಗೀಶ, ಸಾಗರ್, ಗಿರೀಶ, ಪುಟ್ಟಪ್ಪ, ಮೇಘ್ಯನಾಯಕ, ಹರೀಶ, ಸಿದ್ದರಾಮ ಪೂಜಾರಿ, ನಾಗೇಶ, ಶ್ರೀನಿವಾಸ, ಮಾದೇಶ್ ಇದ್ದರು.

ರಾಘವೇಂದ್ರಗೌಡಗೆ ಎದೆನೋವು; ಆಸ್ಪತ್ರೆಗೆ ದಾಖಲು

ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದ ಮೇಟಗಳ್ಳಿಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ರಾಘವೇಂದ್ರಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿದ್ದು, ಇವರಿಗೆ ಕೆಲವೊಂದು ಸ್ಕ್ಯಾನಿಂಗ್‌ನ ಅಗತ್ಯ ಇದೆ ಎಂದು ಹೇಳಿದ್ದಾಗಿ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.