ADVERTISEMENT

ಸರಗಳ್ಳತನ ತಡೆಗೆ ವಿಶೇಷ ಕಾರ್ಯಾಚರಣೆ ಆರಂಭ

ನಗರದಲ್ಲಿ ಎಚ್ಚೆತ್ತ ಪೊಲೀಸರು, 160ಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:24 IST
Last Updated 4 ಮೇ 2019, 1:24 IST
ಸರಗಳನ್ನು ರಕ್ಷಿಸಿಕೊಳ್ಳುವ ಕುರಿತು ಮಹಿಳೆಯರಿಗೆ ಪೊಲೀಸರು ಮಾಹಿತಿ ನೀಡುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ಸರಗಳನ್ನು ರಕ್ಷಿಸಿಕೊಳ್ಳುವ ಕುರಿತು ಮಹಿಳೆಯರಿಗೆ ಪೊಲೀಸರು ಮಾಹಿತಿ ನೀಡುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು   

ಮೈಸೂರು: ನಗರದಲ್ಲಿ 7 ಕಡೆ ಸರಗಳ್ಳತನ ನಡೆದ ಬಳಿಕ ಎಚ್ಚೆತ್ತ ಪೊಲೀಸರು ಸರಗಳ್ಳತನ ತಡೆಗೆ ಶುಕ್ರವಾರದಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

‘ಫಾಸ್ಟ್‌ಟ್ರ್ಯಾಕ್’ ಹಾಗೂ ‘ಶುಭೋದಯ’ ಎಂಬ ಹೆಸರಿನ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10 ಮತ್ತು ಸಂಜೆ 4.30ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

ನಗರದ 94 ಕಡೆ ‘ಸ್ಟಾಟಿಂಗ್ ಪಾಯಿಂಟ್‌’ಗಳನ್ನು ಗುರುತಿಸಿದ್ದು, ಇಲ್ಲಿ 160 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 40 ‘ಗರುಡ’ ವಾಹನಗಳಿಂದ ಪಹರೆ ನಡೆಸಲಿದ್ದು, ಇವುಗಳಲ್ಲಿ 6 ಮಹಿಳಾ ಸಿಬ್ಬಂದಿ ಇರುವ ‘ಗರುಡ’ ವಾಹನಗಳೇ ಇವೆ. ಜತೆಗೆ, 25 ‘ಚೀತಾ’ ವಾಹನಗಳಲ್ಲೂ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.

ADVERTISEMENT

ಸಂಚಾರ ಪೊಲೀಸರನ್ನು 30 ಸ್ಥಳಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ನಂಬರ್ ಪ್ಲೇಟ್‌ ಇಲ್ಲದ 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ 6 ಗಂಟೆಯಿಂದಲೇ ಉದ್ಯಾನಗಳು, ವಾಯುವಿಹಾರ ಮಾಡುವಂತಹ ಜಾಗಗಳು, ಕ್ರೀಡಾಂಗಣಗಳು, ದೇವಸ್ಥಾನಗಳು, ಹಾಲಿನ ಅಂಗಡಿಗಳ ಬಳಿ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.

ಮತ್ತೆ ಸಂಜೆ 4 ಗಂಟೆ ಕಾರ್ಯಾಚರಣೆ ಆರಂಭಿಸುವ ಪೊಲೀಸರು ರಾತ್ರಿ 10 ಗಂಟೆಯವರೆಗೂ ವಿಶೇಷ ನಿಗಾ ಇರಿಸುತ್ತಿದ್ದಾರೆ.

ಧ್ವನಿವರ್ಧಕಗಳ ಮೂಲಕ ಪ್ರಚಾರ:

ಧ್ವನಿವರ್ಧಕಗಳ ಮೂಲಕ ಸರಗಳ್ಳತನ ಕುರಿತು ಪೊಲೀಸರು ಮಾಹಿತಿ ನೀಡುವ ಕೆಲಸ ಆರಂಭಿಸಿದ್ದಾರೆ. ವಿಶೇಷವಾಗಿ ಮಹಿಳಾ ಗರುಡ ಪೊಲೀಸರು ಧ್ವನಿವರ್ಧಕದಲ್ಲಿ ಸರವನ್ನು ಜೋಪಾನವಾಗಿಟ್ಟುಕೊಳ್ಳುವ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಣ್ಣಿಗೆ ಕುಕ್ಕುವಂತಹ ಆಭರಣ ಧರಿಸಿ ಹೋಗುತ್ತಿರುವ ಮಹಿಳೆಯರನ್ನು ತಡೆದು ಅವರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.‌

ಮತ್ತೆರಡು ಸರಗಳ್ಳತನ

ನಗರದಲ್ಲಿ ಗುರುವಾರ ಕೇವಲ 5 ಸರಗಳ್ಳತನಗಳು ಮಾತ್ರ ನಡೆದಿಲ್ಲ, ಒಟ್ಟು 7 ಪ್ರಕರಣಗಳು ನಡೆದಿವೆ. ಸರ ಕಳೆದುಕೊಂಡ ಇನ್ನಿಬ್ಬರು ಮಹಿಳೆಯರು ತಡವಾಗಿ ದೂರು ನೀಡಿದ್ದಾರೆ.

ವಿದ್ಯಾರಣ್ಯಪುರಂನ ರಾಮಕೃಷ್ಣ ರಸ್ತೆಯ ಶಂಭುಲಿಂಗೇಶ್ವರ ಸ್ಟೋರ್‌ ಬಳಿ ಗೀತಾ ಎಂಬುವವರು ರಾತ್ರಿ 8.50ರಲ್ಲಿ ನಡೆದು ಬರುತ್ತಿದ್ದಾಗ ಎದುರಿನಿಂದ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಒಬ್ಬಾತ 32 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಇದೇ ಬಡಾವಣೆಯ ರಾಘವೇಂದ್ರ ಮಠದ ಹತ್ತಿರ ಆರ್.ನಾಗರತ್ನಮ್ಮ ಅವರು ರಾತ್ರಿ 8.30ರಲ್ಲಿ ನಡೆದು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಗುರುವಾರ ಒಂದೇ ದಿನ ವಿದ್ಯಾರಣ್ಯಾಪುರಂ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 4 ಸರಗಳ್ಳತನಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.