ADVERTISEMENT

ಪರಿಶಿಷ್ಟರು, ಆದಿವಾಸಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 4:30 IST
Last Updated 3 ಡಿಸೆಂಬರ್ 2024, 4:30 IST
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಕೆ.ಆರ್. ನಗರ ತಾಲ್ಲೂಕು ರಾಂಪುರಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕುಂದುಕೊರತೆ ಆಲಿಸಿದರು
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಕೆ.ಆರ್. ನಗರ ತಾಲ್ಲೂಕು ರಾಂಪುರಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕುಂದುಕೊರತೆ ಆಲಿಸಿದರು   

ಮೈಸೂರು: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಸೋಮವಾರದಿಂದ ಜಿಲ್ಲೆಯಲ್ಲಿ ಪ್ರವಾಸ ಆರಂಭಿಸಿದ್ದಾರೆ.

ಹುಣಸೂರು, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳ ಅಲೆಮಾರಿ ದೊಂಬರ ಸಮುದಾಯ, ಹಂದಿಜೋಗಿ, ಡೊಂಗ್ರಿ ಗರಾಸಿಯಾ, ಜೇನು ಕುರುಬ ಹಾಗೂ ಸೋಲಿಗ ಸಮುದಾಯದವರ ಕುಂದು-ಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

‘ಎಸ್‌ಸಿ, ಎಸ್‌ಟಿ ಅಲೆಮಾರಿ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ನೀಡಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಶಿಕ್ಷಣ ಪಡೆದುಕೊಳ್ಳಬೇಕು. ವಸತಿ ಶಾಲೆಗಳಲ್ಲಿ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ಶಾಲೆಗೆ ಸೇರಿಸಿಕೊಳ್ಳುವ ಅವಕಾಶ ನೀಡಿದ್ದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಅಲೆಮಾರಿ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿ ಅಲೆಮಾರಿ ಕೋಶ ರಚಿಸಿ, ಹೆಚ್ಚುವರಿ ಅನುದಾನ ಒದಗಿಸಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ರಕ್ಷಣೆ ನೀಡುತ್ತಿದೆ. ದೌರ್ಜನ್ಯ ನಡೆದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಪೊಲೀಸರಿಗೆ, ನಿಗಮಕ್ಕೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು. 

‘ನಾವಿಲ್ಲಿ 22 ಕುಟುಂಬಗಳಿದ್ದೇವೆ. ನಮಗೆ 50 ವರ್ಷಗಳ ನಂತರ ಮನೆ ಹಕ್ಕುಪತ್ರ ನೀಡಲಾಗಿದೆ. ಸ್ಮಶಾನವಿಲ್ಲದೆ ಅಂತ್ಯಕ್ರಿಯೆ ನಡೆಸಲು ಪರದಾಡುತಿದ್ದೇವೆ. ರಸ್ತೆ-ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚಿರತೆ ಹಾವಳಿ ಹೆಚ್ಚಾಗಿದ್ದು, ಕೂಡಲೇ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹುಣಸೂರು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ದೊಂಬರ ಕಾಲೊನಿಯ ಜನರು ಕೋರಿದರು.

ಪಿರಿಯಾಪಟ್ಟಣ ತಾಲ್ಲೂಕಿನ ರಾಣಿ ಗೇಟ್(ಕೊಪ್ಪ ಸಮೀಪ) ಬಳಿ ವಾಸವಿರುವ ಜೇನು ಕುರುಬ ಮತ್ತು ಸೋಲಿಗ ಸಮುದಾಯದವರಿಂದ ಅಧ್ಯಕ್ಷರು ಮನವಿ ಸ್ವೀಕರಿಸಿದರು.

ಎಸ್‌ಸಿ, ಎಸ್‌ಟಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ರವಿಕುಮಾರ್ ಎನ್.ಕೊಡಗಳ್ಳಿ, ಅಖಿಲ ಕರ್ನಾಟಕ ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಎಂ.ಭಜಂತ್ರಿ, ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದ್‌ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ರಂಗಸ್ವಾಮಿ, ನೌಕರರ ಘಟಕದ ಎನ್.ರವಿಕುಮಾರ್, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಮುತ್ತುರಾಜ್, ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಪಿರಿಯಾಪಟ್ಟಣ ತಾಲ್ಲೂಕು ಅಧ್ಯಕ್ಷ ಸತ್ಯನಾರಾಯಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.