ADVERTISEMENT

ಚಾಮುಂಡಿಬೆಟ್ಟದ ‘ಪ್ರಸಾದ’ ಯೋಜನೆಗೆ ಅತೃಪ್ತಿ

ಮತ್ತೊಂದು ವಿಸ್ತೃತ ಯೋಜನಾ ವರದಿ ತಯಾರಿಸಲು ಸಂಸದ ಪ್ರತಾಪಸಿಂಹ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:12 IST
Last Updated 9 ನವೆಂಬರ್ 2019, 10:12 IST
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪಸಿಂಹ ಮಾತನಾಡಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಇದ್ದಾರೆ
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪಸಿಂಹ ಮಾತನಾಡಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಇದ್ದಾರೆ   

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟವನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಇಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ ಅತೃಪ್ತಿ ವ್ಯಕ್ತಪಡಿಸಿತು.

ಒಂದು ವಾರದಲ್ಲಿ ಮತ್ತೊಂದು ಯೋಜನಾ ವರದಿ ತಯಾರಿಸಲು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್ ಅವರಿಗೆ ಸಂಸದ ಪ್ರತಾಪಸಿಂಹ ಸೂಚನೆ ನೀಡಿದರು.

ಯೋಜನಾ ವರದಿ ತಯಾರಿಸಿದ್ದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇಲ್ಲಿನ ಜನರಿಗೆ ಏನು ಬೇಕು ಎನ್ನುವುದನ್ನು ಕೇಳಿ ತಿಳಿದುಕೊಂಡು ನಂತರ ಯೋಜನಾ ವರದಿ ತಯಾರಿಸಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ಯೋಜನಾ ವರದಿ ತಯಾರಿಕೆಗೆ ₹ 41 ಲಕ್ಷ ನೀಡುವುದನ್ನು ಖಂಡಿಸಿದ ಅವರು, ‘ಇದು ಸಾರ್ವಜನಿಕರ ಹಣ. ಈ ರೀತಿ ಇದನ್ನು ಪೋಲು ಮಾಡಬೇಡಿ’ ಎಂದು ಹರಿಹಾಯ್ದರು.

ಮೊದಲು ಬೆಟ್ಟದ ಮೆಟ್ಟಿಲನ್ನು ದುರಸ್ತಿಗೊಳಿಸಬೇಕಿದೆ. ಹಿರಿಯ ನಾಗರಿಕರು, ದುರ್ಬಲರು ಸುಲಭವಾಗಿ ಹತ್ತುವಂತಹ ಮೆಟ್ಟಿಲುಗಳು ಇರಬೇಕು. ಹಾಗೆಂದು, ಮೆಟ್ಟಿಲುಗಳ ಸಂಖ್ಯೆ ಹೆಚ್ಚಬಾರದು. ಇರುವ ಮೆಟ್ಟಿಲುಗಳನ್ನೇ ಸುಲಭವಾಗಿ ಹತ್ತುವುದಕ್ಕೆ ತಕ್ಕಂತೆ ರೂಪಿಸಬೇಕು. ಕುಡಿಯುವ ನೀರು ಹಾಗೂ ಶೌಚಾಲಯಗಳ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಮೆಟ್ಟಿಲುಗಳ ವಿನ್ಯಾಸಕ್ಕೆ ಕರಕುಶಲಕರ್ಮಿಗಳನ್ನು, ಕಮಾನು ಗೋಪುರಗಳಿಗೆ ಸಂಬಂಧಿಸಿದಂತೆ ‘ಕಾವಾ’ ಕಾಲೇಜಿನ ಪರಿಣತರನ್ನು ಸಂಪರ್ಕಿಸಬೇಕು. ಜತೆಗೆ, ಚಾಮುಂಡಿಬೆಟ್ಟದ ಕುರಿತು ವಿಶೇಷ ಆಸಕ್ತಿ ಇರುವ ನಾಗರಿಕರು ಅನೇಕರಿದ್ದಾರೆ. ಇವರ ಸಲಹೆ ಪಡೆದು ₹ 41 ಕೋಟಿ ಮೊತ್ತದ ‘ಪ್ರಸಾದ’ ಯೋಜನೆಯ ಮತ್ತೊಂದು ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆ

‘ಆಯುಷ್ಮಾನ್’ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 35 ಸಾವಿರ ಕಾರ್ಡ್ ವಿತರಿಸಲಾಗಿದೆ ಎಂಬ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರ ಮಾಹಿತಿ ಕೇಳಿ ಕಿಡಿಕಾರಿದ ಅವರು, ಈ ಸಂಬಂಧ ಕೂಡಲೇ ವಿಶೇಷ ಅಭಿಯಾನ ನಡೆಸಬೇಕು ಎಂದು ನಿರ್ದೇಶಿಸಿದರು.

‘ಮೊದಲು ಟಿಪ್‌ಟಾಪ್‌ ಆಗಿ ಡ್ರೆಸ್‌ ಮಾಡಿಕೊಳ್ಳಿ. ವೈದ್ಯರು ರೋಗಿಗಳ ಹಾಗೆ ಕಾಣಿಸಬಾರದು. ನೀವು ವೈದ್ಯರ ಹಾಗೆ ಕಾಣಿಸಬೇಕು’ ಎಂದು ಚಟಾಕಿ ಹಾರಿಸಿದರು.

‘ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧಿಕಾರಿಗಳು ನಿಜವಾದ ರಾಜಕಾರಣಿಗಳು’ ಚಾಟಿ ಬೀಸಿದ ಪ್ರತಾಪಸಿಂಹ, ‘ತಂದೆ, ತಾಯಿ, ಪುತ್ರನಿಗೆ ಪ್ರತ್ಯೇಕ ಮನೆಗಳನ್ನು ಈ ಅಧಿಕಾರಿಗಳೇ ನೀಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.