ADVERTISEMENT

ಬೆಟ್ಟದ ಕುತ್ತಿಗೆ ಹಿಸುಕಿತೆ ‘ಪ್ರಸಾದ’?

ವಾಹನ ನಿಲುಗಡೆಗಾಗಿ ಸಿಡಿದ ನೂರಾರು ಬಂಡೆಗಳು, ಗ್ರಾಮದ ಸರಹದ್ದಿಗೆ ಮಿತಿಯೇ ಇಲ್ಲ

ಕೆ.ಎಸ್.ಗಿರೀಶ್
Published 28 ಅಕ್ಟೋಬರ್ 2021, 3:51 IST
Last Updated 28 ಅಕ್ಟೋಬರ್ 2021, 3:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೈಸೂರು: ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆ ಚಾಮುಂಡಿಬೆಟ್ಟದ ಕುತ್ತಿಗೆ ಹಿಸುಕಿತೆ? ವರ್ಷದಿಂದ ವರ್ಷಕ್ಕೆ ವಿಸ್ತರಣೆಗೊಳ್ಳುತ್ತಿರುವ ಗ್ರಾಮದ ಸರಹದ್ದು ಬೆಟ್ಟಕ್ಕೆ ಮಾರಕವಾಗುತ್ತಿದೆಯೇ ಎಂಬ ಪ್ರಶ್ನೆ ಸದ್ಯ ಪರಿಸರವಾದಿಗಳನ್ನು ಕಾಡಲಾರಂಭಿಸಿದೆ.

ಎರಡು ವರ್ಷದ ಹಿಂದೆ ‘ಪ್ರಸಾದ’ ಯೋಜನೆಯಡಿ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆದವು. ನೋಡನೋಡುತ್ತಿದ್ದಂತೆ ಮಣ್ಣಿನ ನೆಲವು ಕಾಂಕ್ರಿಟ್‌ಮಯವಾಯಿತು. ಬಹುಮಹಡಿ ವಾಹನ ನಿಲುಗಡೆಗಾಗಿ 8 ಎಕರೆಯಲ್ಲಿದ್ದ ಹಸಿರನ್ನು ನಾಶಪಡಿಸಿದ ನೆನಪು ಗ್ರಾಮಸ್ಥರಲ್ಲಿ ಇನ್ನೂ ಹಸಿರಾಗಿದೆ!

‘ಕಾಮಗಾರಿಗಳಿಗಾಗಿ ನೂರಾರು ಬಂಡೆಗಲ್ಲುಗಳನ್ನು ನಿರ್ದಾಕ್ಷಿಣ್ಯ ವಾಗಿ ಸಿಡಿಸಿದರು. ಕಡಿಮೆ ಪ್ರಮಾಣದ ಸ್ಫೋಟಕಗಳನ್ನು ಬಳಕೆ ಮಾಡಿದ್ದ ರಿಂದ ನಗರದವರೆಗೂ ಶಬ್ದ ಕೇಳಿ ಬರಲಿಲ್ಲ ಅಷ್ಟೇ. ಸಣ್ಣ ಸಣ್ಣ ಬಂಡೆಗಳನ್ನು ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸಿದರು. ದೊಡ್ಡ ಬಂಡೆಗಳನ್ನು ಸಿಡಿಸಿದ ಸದ್ದು ಇನ್ನೂ ಕಿವಿಯಲ್ಲೇ ಇದೆ’ ಎಂದು ಗ್ರಾಮಸ್ಥರೊಬ್ಬರು ವಿಷಾದಿಸಿದರು.

ADVERTISEMENT

‘ಬಂಡೆಗಳು ಸಿಡಿದು ಚೂರಾದ ನಂತರ ಬೆಟ್ಟದ ಚಿತ್ರಣವೇ ಬದಲಾಯಿತು. ಮಳೆ ಬಂದರೆ ಕಲ್ಲುಗಳು ಉರುಳುತ್ತಿವೆ. ಸಣ್ಣ ಸಣ್ಣ ಕಲ್ಲುಗಳನ್ನು ವಾಹನ ಸವಾರರು ತಾವಾಗಿಯೇ ಪಕ್ಕಕ್ಕೆ ಸರಿಸುವುದರಿಂದ ಕಲ್ಲುಗಳು ಕುಸಿದುಬೀಳುವುದು ಬೆಳಕಿಗೆ ಬಂದಿಲ್ಲ. ಕೆಲವೊಮ್ಮೆ ದೊಡ್ಡ ಗಾತ್ರದ ಬಂಡೆಗಳೂ ಉರುಳಿವೆ’ ಎಂದು
ತಿಳಿಸಿದರು.

ಬೆಟ್ಟದ ಪಾರ್ಕಿಂಗ್‌ ಸ್ಥಳದಲ್ಲಿ ಏಕಾಕಾಲಕ್ಕೆ 600 ವಾಹನಗಳನ್ನು ನಿಲ್ಲಿಸುವುದರಿಂದ ಸಹಜವಾಗಿಯೇ ಬೆಟ್ಟದ ಒಂದು ಭಾಗದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದು ಕೂಡ ಕುಸಿತಕ್ಕೆ ಕಾರಣವಾಗಬಹುದು ಎಂಬುದು ಅವರ ಅನಿಸಿಕೆ.

ಚಾಮುಂಡೇಶ್ವರಿ ದೇವಸ್ಥಾನವು 5 ಎಕರೆ ಪ್ರದೇಶದಲ್ಲಿದ್ದರೆ, ಅಲ್ಲಿಗೆ ಬರುವ ಭಕ್ತರ ವಾಹನ ನಿಲುಗಡೆ ತಾಣ 8 ಎಕರೆ, ಪ್ರಸಾದ ಸ್ವೀಕರಿಸುವ ದಾಸೋಹ ಭವನ ಒಂದೂವರೆ ಎಕರೆ ಪ್ರದೇಶದಲ್ಲಿದೆ. ಇವೆಲ್ಲವೂ ಬೆಟ್ಟದ ಪರಿಸರವನ್ನು ಹಾಳು ಮಾಡಿವೆ.

‘ದೇವಸ್ಥಾನದ ಸುತ್ತಲೂ ಇದ್ದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ಹೊಸದಾಗಿ 130 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸ ಲಾಗಿದೆ. ಇದೂ ಸಹ ಬೆಟ್ಟಕ್ಕೆ ಬೇಕಿರಲಿಲ್ಲ’ ಎಂದು ವ್ಯಾಪಾರಿ ಕೃಷ್ಣ ಹೇಳುತ್ತಾರೆ.

ಮಹಿಷಾಸುರ ಪ್ರತಿಮೆವರೆಗೂ ಕಾಂಕ್ರಿಟ್‌ ರಸ್ತೆ, ₹ 9.30 ಕೋಟಿ ವೆಚ್ಚದಲ್ಲಿ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿಬೆಟ್ಟದವರೆಗೂ 8 ಕಿ.ಮೀ.ವರೆಗೂ ಡಾಂಬರು ರಸ್ತೆ , 2.4 ಕಿ.ಮೀ ಉದ್ದದ ನಂದಿ ರಸ್ತೆಯ ಡಾಂಬರೀಕರಣ, ಚರಂಡಿ ತಡೆಗೋಡೆ ನಿರ್ಮಾಣ ಕಾಮಗಾರಿಗಳೂ ನಡೆದಿವೆ.

ಗ್ರಾಮಠಾಣಾಗೆ ಮಿತಿ ಇಲ್ಲ!: ‘ಚಾಮುಂಡಿಬೆಟ್ಟದಲ್ಲಿ ಗ್ರಾಮ ಠಾಣಾ ವರ್ಷದಿಂದ ವರ್ಷಕ್ಕೆ ವಿಸ್ತರಣೆಗೊಳ್ಳುತ್ತಿರುವುದೂ ಬೆಟ್ಟದ ಕುಸಿತಕ್ಕೆ ಕಾರಣವಾಗಿದೆ’ ಎಂಬ ಚರ್ಚೆ ಆರಂಭವಾಗಿದೆ.

ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ, 5 ವರ್ಷಗಳ ಹಿಂದೆ 300 ಕುಟುಂಬಗಳಿದ್ದವು. ಈಗ ಅವುಗಳ ಸಂಖ್ಯೆ 450ಕ್ಕೆ ಹೆಚ್ಚಿದೆ. ಮತದಾರರ ಸಂಖ್ಯೆ 1,200ರಿಂದ 1,500ಕ್ಕೆ ಏರಿದೆ.

‘ಗ್ರಾಮಠಾಣಾ ವ್ಯಾಪ್ತಿ ಉರುವುದು 52 ಎಕರೆ ಮಾತ್ರ. ಹೊಸ ಕುಟುಂಬಗಳು ವಾಸಕ್ಕಾಗಿ ಅನಧಿಕೃತವಾಗಿ ಬೆಟ್ಟವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ’ ಎಂಬ ಆರೋಪವೂ ಕೇಳಿ ಬಂದಿದೆ.

ಬೆಟ್ಟದಲ್ಲಿ ಮನೆ ಅಳಿಯಂದಿರೇ ಹೆಚ್ಚು!

‘ಮದುವೆಯ ಬಳಿಕ ಬಹುತೇಕ ಹೆಣ್ಣು ಮಕ್ಕಳು ಗಂಡನ ಮನೆ ಸೇರದೆ, ಬೆಟ್ಟದಲ್ಲೇ ವಾಸ್ತವ್ಯ ಹೂಡುತ್ತಿರುವುದರಿಂದಲೂ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮಠಾಣಾ ವಿಸ್ತಾರಗೊಳ್ಳಲು ಇದು ಮುಖ್ಯ ಕಾರಣ. ಅವರೆಲ್ಲ ಬೆಟ್ಟದಲ್ಲಿ ವ್ಯಾಪಾರ ಮಾಡುತ್ತಾ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ’ ಎಂದು ಪಂಚಾಯ್ತಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.