ADVERTISEMENT

‘ನಮಸ್ಕಾರವೇ ನಮ್ಮ ಸಂಸ್ಕಾರ’

ಭಾಷೆಯ ಸೌಂದರ್ಯ ಬಣ್ಣಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 20:05 IST
Last Updated 13 ಜುಲೈ 2019, 20:05 IST

ಮೈಸೂರು: ‘ನಮಸ್ಕಾರವೇ ನಮ್ಮ ಸಂಸ್ಕಾರ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಯಾವುದಿರಲಿ ನಾವು ಬಳಸೋದು ನಮಸ್ತೆ, ನಮಸ್ಕಾರ ಎಂಬುದನ್ನು ಮಾತ್ರ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್‌, ಗುಡ್‌ ಇವಿನಿಂಗ್‌, ಗುಡ್‌ ನೈಟ್‌ ಎಂಬ ಆಯಾ ಹೊತ್ತಿನ ಶುಭಾಶಯ ಕೋರಿಕೆ ಯಾವಾಗಲೂ ಶುಭಕರವಾಗಿರಲ್ಲ. ಆದರೆ ನಮ್ಮ ನಮಸ್ಕಾರ ಮಾತ್ರ ಸದಾ ಒಂದೇ ರೀತಿಯಾಗಿರುತ್ತದೆ’ ಎಂದು ಭಾಷೆಯ ಸೊಗಡನ್ನು ಬಣ್ಣಿಸಿದರು.

‘ಭಾರತದಲ್ಲಿ ಹಲ ಭಾಷೆಗಳಿವೆ. ಪ್ರತಿ ಭಾಷೆಯೂ ದೊಡ್ಡದೇ. ಅತ್ಯುತ್ತಮವಾದುದೇ. ಆಯಾ ನೆಲದ ಭಾಷೆ, ಸಂಸ್ಕೃತಿಗೆ ನಂಟಿದೆ. ಭಾರತೀಯ ಭಾಷಾ ಸಂಸ್ಥಾನ ಐವತ್ತು ವರ್ಷದಿಂದೀಚೆಗೆ ಭಾಷೆಯ ಉಳಿವು, ಸಂರಕ್ಷಣೆಗೆ ಶ್ರಮಿಸುತ್ತಿದೆ. ಆದರೆ ಸಹಸ್ರ, ಸಹಸ್ರ ವರ್ಷಗಳ ಹಿಂದಿನಿಂದಲೂ ರಾಜ–ಮಹಾರಾಜರು ತಮ್ಮ ನೆಲೆಗಟ್ಟಿನ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಮೈಸೂರಿನ ಮಹಾರಾಜರು, ವಿಜಯನಗರದ ಶ್ರೀಕೃಷ್ಣದೇವರಾಯರ ಕೊಡುಗೆ ಸಾಕಷ್ಟಿದೆ’ ಎಂದು ವೆಂಕಯ್ಯನಾಯ್ಡು ಮಹಾರಾಜರ ಕೊಡುಗೆಯನ್ನು ಸ್ಮರಿಸಿದರು.

ADVERTISEMENT

‘ವಸುದೈವ ಕುಟುಂಬಕಂ... ವಿಶ್ವವೇ ಒಂದು ಎಂಬುದು ಇಂದಿನ ಸೂತ್ರವಾಗಿದೆ. ಸಹಸ್ರಾರು ಭಾಷೆ, ಹಲ ಸಂಸ್ಕೃತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಭಾರತದ ನೆಲದಲ್ಲಿ ವಿವಿಧತೆಯಲ್ಲಿ ಏಕತೆ ಬಿಂಬಿತಗೊಳ್ಳುತ್ತಿರುವುದೇ ವಿಶೇಷವಾಗಿದೆ’ ಎಂದರು.

ದೇಶಭಕ್ತಿ: ‘ಮಾತೃ ಭಾಷೆ ರಕ್ಷಣೆಯೂ ದೇಶಭಕ್ತಿಯಾಗಿದೆ’ ಎಂದು ಉಪರಾಷ್ಟ್ರಪತಿ ಹೇಳಿದರು.

‘ಭಾರತದಲ್ಲಿನ ಪ್ರತಿ ಭಾಷೆಯೂ ತನ್ನದೇ ಐತಿಹ್ಯ, ಮಹತ್ವ ಹೊಂದಿದೆ. ಈ ನೆಲದ ಹಲವು ಭಾಷೆಗಳಿಗೆ ಸಹಸ್ರ, ಸಹಸ್ರ ವರ್ಷಗಳ ಇತಿಹಾಸವಿದೆ. ಜನ್ಮಕೊಟ್ಟ ತಂದೆ–ತಾಯಿ, ಜನ್ಮಭೂಮಿ, ವಿದ್ಯೆ ಕಲಿಸಿದ ಗುರು, ಮಾತೃ ಭಾಷೆಯನ್ನು ಎಂದಿಗೂ ಮರೆಯಬಾರದು’ ಎಂದು ಕಿವಿಮಾತು ತಿಳಿಸಿದರು.

‘ಸುಪ್ರೀಂಕೋರ್ಟ್‌ ಸ್ಥಳೀಯ ಭಾಷೆಗಳಲ್ಲೂ ತೀರ್ಪು ಸಿಗುವಂತೆ ನೋಡಿಕೊಳ್ಳುತ್ತಿದೆ. ಹೈಕೋರ್ಟ್‌ಗಳು ಇದನ್ನು ಪಾಲಿಸಬೇಕು. ಜಿಲ್ಲಾ ಹಂತದಲ್ಲಿನ ನ್ಯಾಯಾಲಯಗಳಲ್ಲಿನ ಆದೇಶ ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಸಿಗಬೇಕು. ವಾದ–ವಿವಾದ ಸಹ ಪ್ರಾದೇಶಿಕ ಭಾಷೆಯಲ್ಲೇ ನಡೆಯಬೇಕು’ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.