ADVERTISEMENT

ನಿಮ್ಮದು ಮುಚ್ಚಿ ಹಾಕುವ ಸರ್ಕಾರವಾಗಿತ್ತು; ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 13:15 IST
Last Updated 6 ಜುಲೈ 2022, 13:15 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಮೈಸೂರು: ‘ಸಿದ್ದರಾಮಯ್ಯ ಅವರದ್ದು ಹಗರಣಗಳನ್ನು ಮುಚ್ಚಿ ಹಾಕುವ ಸರ್ಕಾರವಾಗಿತ್ತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಮುಖ್ಯಮಂತ್ರಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಕಂಡರೆ ಕನಿಕರ ಬರುತ್ತದೆ. ಅವರ ಕಾಲದಲ್ಲಿ ಡಿಐಜಿ ನೇಮಕಾತಿ ಸಮಿತಿ ಅಧ್ಯಕ್ಷರೇ ಸಿಕ್ಕಿಬಿದ್ದಿದ್ದರು. ದಕ್ಷ ಆಡಳಿತ ನೀಡಿದ್ದೇನೆ ಎನ್ನುವ ಇದೇ ಸಿದ್ದರಾಮಯ್ಯ ಎಫ್‌ಐಆರ್‌ನಲ್ಲಿ ಹೆಸರು ಬಂದಿದ್ದರೂ ಸಿಐಡಿಗೆ ಕೊಟ್ಟು ಪ್ರಕರಣ ಮುಚ್ಚಿ ಹಾಕಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುತ್ತೇವೆ ಎಂದು ಡಿವೈಎಸ್ಪಿ ಒಳಗೊಂಡ ದೊಡ್ಡ ಗ್ಯಾಂಗ್ ₹ 18 ಕೋಟಿ ವಸೂಲಿ ಮಾಡಿತ್ತು. ಎಫ್‌ಐಆರ್ ಮಾಡಿದರು, ಸಿಎಡಿಗೆ ಕಳುಹಿಸಿದರು; ಕೊನೆಗೆ ಮುಚ್ಚಿ ಹಾಕಿದರು. ಸದನದಲ್ಲಿ ಈ ಬಗ್ಗೆ ನಾವೇ ಕೇಳಿದ್ದೆವು. ಗಲಾಟೆ ಮಾಡಿದ್ದೆವು. ಆದರೂ ಆ ಸರ್ಕಾರ ಸ್ಪಂದಿಸಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಈ ರಾಜ್ಯ ಹುಟ್ಟಿದ ಮೇಲೆ, ಪ್ರಕರಣವೊಂದರಲ್ಲಿ ತಪ್ಪು ಮಾಡಿದ ದೊಡ್ಡ ಅಧಿಕಾರಿ–ಎಡಿಜಿಪಿಯನ್ನೇ ಬಂಧಿಸಿ ತನಿಖೆಗೆ ಒಳಪಡಿಸಿರುವುದು ಇದೇ ಪ್ರಥಮ. ನಮಗೆ ಇಡೀ ರಾಜ್ಯದ ಜನ ಅಭಿನಂದಿಸುತ್ತಾರೆ. ವಿರೋಧ ಪಕ್ಷದವರು ವಿರೋಧಿಸುತ್ತಿದ್ದಾರಷ್ಟೆ’ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

‘ಎಸಿಬಿ ಕಾರ್ಯವೈಖರಿ ಬಗ್ಗೆ ಮಾತನಾಡಿದ ಹೈಕೋರ್ಟ್‌ ನ್ಯಾಯಾಧೀಶರಿಗೆ ಬೆದರಿಕೆ ಬಂದಿದೆಯಲ್ಲಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ನಾನು ನ್ಯಾಯಾಧೀಶರ ಬಗ್ಗೆ ಮಾತನಾಡುವುದಿಲ್ಲ’ ಎಂದಷ್ಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.