ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 23 ಹಾಗೂ 24ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
23ರಂದು ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಕೆ.ಆರ್. ನಗರದ ಸ್ಟೇಡಿಯಂ ಹೆಲಿಪ್ಯಾಡ್‌ಗೆ ಬಂದಿಳಿಯುವ ಅವರು, ಅಲ್ಲಿನ ರೇಡಿಯೊ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 3.30ಕ್ಕೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. ನಂತರ, 3.50ಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿರುವ ‘ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಫಿ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ’ಗೆ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡುವರು. ರಾತ್ರಿ ಶಾರದಾದೇವಿನಗರದ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡುವರು.
24ರಂದು ಬೆಳಿಗ್ಗೆ 10.30ಕ್ಕೆ ಇಲವಾಲದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸುವರು. ಬೆಳಿಗ್ಗೆ 11.30ಕ್ಕೆ ವಿನೋಬಾ ರಸ್ತೆಯ ಕಲಾಮಂದಿರದಲ್ಲಿ ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಮತ್ತು ವೀರಶೈವ–ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ‘ನಮ್ಮ ಬಸವ ಜಯಂತಿ’ ಹಾಗೂ ‘ನಮ್ಮ ನಡೆ ಅನುಭವ ಮಂಟಪದ ಕಡೆ’ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಸ್ಟಡಿ ಸೆಂಟರ್ ಉದ್ಘಾಟಿಸುವರು. ಸಂಜೆ 6ಕ್ಕೆ ಕಲಾಮಂದಿರದಲ್ಲಿ ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ’ ರಂಗರೂಪವನ್ನು ಕಲಾಮಂದಿರದಲ್ಲಿ ವೀಕ್ಷಿಸುವರು. ರಾತ್ರಿ 8ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.