ADVERTISEMENT

ಕರ್ತವ್ಯಕ್ಕೆ ಹಾಜರಾದವರಿಗೆ ಪ್ರಶಂಸನಾ ಪತ್ರ, ಸಂಬಳ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 21:26 IST
Last Updated 12 ಏಪ್ರಿಲ್ 2021, 21:26 IST
ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ, ಕೆಎಸ್‌ಆರ್‌ಟಿಸಿ ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ಸೋಮವಾರ ಪ್ರಶಂಸನಾ ಪತ್ರ ವಿತರಿಸಿದರು
ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ, ಕೆಎಸ್‌ಆರ್‌ಟಿಸಿ ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ಸೋಮವಾರ ಪ್ರಶಂಸನಾ ಪತ್ರ ವಿತರಿಸಿದರು   

ಮೈಸೂರು: ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿ, ಸಂಬಳವನ್ನೂ ನೀಡುವ ಮೂಲಕ ನೌಕರರ ಮನಗೆಲ್ಲುವ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ಮತ್ತು ನಗರ ಘಟಕಗಳು ಮುಂದಾಗಿದೆ. ‌‌

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌, ‘ದಿನೇ ದಿನೇ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಹೆಚ್ಚಿದೆ. ಶೇ 30ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಬಂದಿದ್ದು, ಇವರಿಗೆಲ್ಲ ಪ್ರಶಂಸನಾಪತ್ರ, ಸಂಬಳ ಹಾಗೂ ಸಿಹಿಯನ್ನೂ ವಿತರಿಸಲಾಗಿದೆ. ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದಿಸಿದ 15 ಜನರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ನಗರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜ್‌ ಪ್ರತಿಕ್ರಿಯಿಸಿ, ‘ಶೇ 40ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಇವರಿಗೆಲ್ಲ ಮಂಗಳವಾರ ಪ್ರಶಂಸನಾ ಪತ್ರ ನೀಡಲಾಗುವುದು. ಎಲ್ಲರಿಗೂ ಸೋಮವಾರವೇ ಸಂಬಳ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಈ ಮಧ್ಯೆ ಸೋಮವಾರ ಸಂಜೆ ನಗರದ 2 ಕಡೆ ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಡಿಪೊದಿಂದ ಚಿನಕುರಳಿ ಮಾರ್ಗವಾಗಿ ತೆರಳಿದ್ದ ಬಸ್ಸೊಂದಕ್ಕೆ ಭಾನುವಾರ ರಾತ್ರಿ ಕಲ್ಲೆಸೆದಿದ್ದು, ಮುಂಭಾಗದ ಗಾಜು ಒಡೆದುಹೋಗಿದೆ. ಚಾಲಕ ಶಿವಣ್ಣಗೌಡ ಅವರ ಎಡಗೈಗೆ ಪೆಟ್ಟಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.