ADVERTISEMENT

‘ವಿಷಯ ಗ್ರಹಿಕೆ ಪರೀಕ್ಷೆ ಯಶಸ್ಸಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 15:27 IST
Last Updated 26 ಜೂನ್ 2022, 15:27 IST
ಸರಸ್ವತಿಪುರಂನ ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರೊಬೇಷನರಿ ಡಿವೈಎಸ್ಪಿ ಎಂ. ಮಹೇಂದ್ರ, ಸಾಹಿತಿ ಟಿ. ಸತೀಶ್ ಜವರೇಗೌಡ, ಸರ್ಕಲ್ ಇನ್‌ಸ್ಪೆಕ್ಟರ್‌ ಸಿ.ಎಂ. ರವೀಂದ್ರ ಅವರನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಇ. ರಘು ಸನ್ಮಾನಿಸಿದರು. ಅಕಾಡೆಮಿಯ ಕೆ. ರಾಜೇಶ್, ಮಹೇಶ್ ಇದ್ದಾರೆ

ಮೈಸೂರು: ‘ಪೂರ್ವ ಸಿದ್ಧತೆಯೊಂದಿಗೆ ವೇಳಾಪಟ್ಟಿ ತಯಾರಿಸಿಕೊಂಡು, ಪುಸ್ತಕಗಳನ್ನು ಏಕಾಗ್ರತೆಯಿಂದ ಓದಿ ವಿಷಯ ಗ್ರಹಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು’ ಎಂದು ಪ್ರೊಬೇಷನರಿ ಡಿವೈಎಸ್ಪಿ ಎಂ. ಮಹೇಂದ್ರ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯಿಂದ ನಡೆದ ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳ ಕುರಿತ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಜಾಲತಾಣದ ಬಳಕೆಯು ಸಮಯ ಹಾಳು ಮಾಡುತ್ತದೆ. ಇದರಿಂದ ದೂರ ಉಳಿದು ಚೆನ್ನಾಗಿ ಓದಿ ಮುಖ್ಯ ಮಾಹಿತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಮೂಲಕ ಪರೀಕ್ಷೆಗೆ ತಯಾರಾಗಬೇಕು’ ಎಂದರು.

ADVERTISEMENT

ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ‘ಈ ಕಾಲಘಟ್ಟ ಸ್ಪರ್ಧಾತ್ಮಕವಾದದ್ದು. ಯಾವುದೇ ನೌಕರಿಗೆ ಹೋಗಬೇಕಾದರೂ ತೀವ್ರ ಪೈಪೋಟಿ ಇದ್ದೇ ಇರುತ್ತದೆ. ಗುರಿ ಮತ್ತು ದಾರಿ ಸ್ಪಷ್ಟಪಡಿಕೊಂಡು ಮುಂದಡಿ ಇಡಬೇಕು. ಓದಿದ್ದನ್ನು ಮನನ ಮಾಡಿಕೊಂಡು, ಆಗಾಗ ಪುನರಾವಲೋಕಿಸುವುದರಿಂದ ಅದು ನೆನಪಿನಲ್ಲಿ ಉಳಿಯುತ್ತದೆ’ ಎಂದು ಕಿವಿಮಾತು ಹೇಳಿದರು.

ಸರಸ್ವತಿಪುರಂ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಸಿ.ಎಂ. ರವೀಂದ್ರ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆ' ಕುರಿತು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿ ಕೆ. ರಾಜೇಶ್ ಅವರ ‘ಸಾಮಾನ್ಯ ಭೂಗೋಳವಿಜ್ಞಾನ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಇ. ರಘು ಆಲನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.