ADVERTISEMENT

ಪತ್ರಕರ್ತರ ಸೋಗಿನಲ್ಲಿ ವೈದ್ಯರೊಬ್ಬರಿಂದ ಸುಲಿಗೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:29 IST
Last Updated 22 ಜುಲೈ 2021, 4:29 IST

ಮೈಸೂರು: ವಾಸ ದೃಢೀಕರಣ ಪತ್ರ ಕೇಳಿದ ಮಹಿಳೆಯೊಬ್ಬರೊಂದಿಗೆ ಮೊಬೈಲ್‌ನಲ್ಲಿ ಅಸಭ್ಯವಾಗಿ ಮಾತನಾಡಿದ ಕುರಿತು ಪಾಲಿಕೆಯ ನೌಕರ ವಿಷಕಂಠೇಗೌಡ ವಿರುದ್ಧ ಇಲ್ಲಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶ್ರಯ ಮನೆಗಾಗಿ ಮಹಿಳೆಯು ವಾಸ ದೃಢೀಕರಣ ಪತ್ರ ಕೇಳಿದ್ದರು. ಅರ್ಜಿಯಲ್ಲಿದ್ದ ಮೊಬೈಲ್‌ ನಂಬರಿಗೆ ಕರೆ ಮಾಡಿದ ಆರೋಪಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯು ಕಚೇರಿಗೆ ನುಗ್ಗಿ ಆರೋಪಿಗೆ ಹೊಡೆದು, ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೃಹಿಣಿ ಆತ್ಮಹತ್ಯೆ‌

ADVERTISEMENT

ಮೈಸೂರು: ಇಲ್ಲಿನ ವಿನಾಯಕನಗರ ನಿವಾಸಿ ಪಲ್ಲವಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತನಹಳ್ಳಿಯವರಾದ ಇವರು ಇಲ್ಲಿನ ಚಂದ್ರು ಎಂಬುವವರೊಂದಿಗೆ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ವಿವಾಹದ ವೇಳೆ ಇವರಿಗೆ 18 ವರ್ಷ ತುಂಬಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪಲ್ಲವಿ ಅವರ ಶಾಲಾ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಎಲ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಕರ್ತರ ಸೋಗಿನಲ್ಲಿ ಸುಲಿಗೆಗೆ ಯತ್ನ; ಪ್ರಕರಣ ದಾಖಲು

ಮೈಸೂರು: ಪತ್ರಕರ್ತರು ಎಂದು ಹೇಳಿಕೊಂಡ ಶ್ರೀನಿಧಿ ಮತ್ತು ಮಂಜುನಾಥ ಎಂಬುವವರು ಇಲ್ಲಿನ ಕೆ.ಆರ್.ಆಸ್ಪತ್ರೆ ರಸ್ತೆಯಲ್ಲಿ ಶ್ರೀಹರಿ ಹೆಲ್ತ್‌ ಕೇರ್‌ ಕ್ಲಿನಿಕ್ ನಡೆಸುತ್ತಿರುವ ಡಾ.ದೇಬಶೀಷ್‌ ಅವರಿಗೆ ₹ 3 ಲಕ್ಷ ನೀಡುವಂತೆ ಹೆದರಿಸಿರುವ ಕುರಿತು ಇಲ್ಲಿನ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದೀರಿ, ನಿಮ್ಮ ಬಳಿ ಇರುವ ದಾಖಲಾತಿ ತೋರಿಸಿ, ಜಿಲ್ಲಾ ಆರೋಗ್ಯಾಧಿಕಾರಿ ದೂರು ಕೊಡುತ್ತೇವೆ’ ಎಂದು ಹೆದರಿಸಿದ ಇವರು, ₹ 3 ಲಕ್ಷ ಕೊಟ್ಟರೆ ಸುಮ್ಮನಿರುವುದಾಗಿ ಹೇಳಿದ್ದಾರೆ. ಈ ಕುರಿತು ವೈದ್ಯರು ದೂರು ನೀಡಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.