ಮೈಸೂರು: ‘ಸದ್ಯ ಮುಖ್ಯಮಂತ್ರಿ ಕುರ್ಚಿ ಹಾಗೂ ಅದರ ಮೇಲೆ ಕುಳಿತಿರುವವರು ಸಹ ಗಟ್ಟಿಯಾಗಿದ್ದಾರೆ. ಬದಲಾವಣೆ ಪ್ರಶ್ನೆ ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಇಲ್ಲಿ ಬುಧವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ಸಂಪುಟ ಪುನರ್‌ರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ನನ್ನ ಸಲಹೆ ಕೊಡಿ ಅಂತ ಕೇಳಿದರೇ ಕೊಡುತ್ತೇನೆ’ ಎಂದರು. ‘ಜಾತಿಗಣತಿ ಕುರಿತು ನಾಳೆ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ಅಲ್ಲಿ ತೀರ್ಮಾನ ಆಗುತ್ತದೆ’ ಎಂದರು.
‘ ಬೆಂಗಳೂರಿನಲ್ಲಿ ಕಾಲ್ತುಳಿತ ಘಟನೆಯಲ್ಲಿ ಇಡೀ ಸರ್ಕಾರ ನೋವು ಅನುಭವಿಸಿದೆ. ಭಾವೋದ್ವೇಗಕ್ಕೆ ಒಳಗಾದ ಜನಸಮುದಾಯದಿಂದ ಅನಿರೀಕ್ಷಿತವಾಗಿ ಈ ಘಟನೆ ನಡೆದಿದೆ. ಇದಕ್ಕೆ ಕಾರಣವಾದ ಲೋಪಗಳ ತನಿಖೆಗೆ ಈಗಾಗಲೇ ಸರ್ಕಾರ ತನಿಖಾಧಿಕಾರಿ ನೇಮಿಸಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಿದೆ. ಆದರೆ ಇದನ್ನೇ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇಂತಹ ಘಟನೆ ಆದಾಗಲೆಲ್ಲ ಹಿಂದೆ ಯಾರೆಲ್ಲ ರಾಜೀನಾಮೆ ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಂಸದ, ಶಾಸಕರ ಮೇಲೆ ಇ.ಡಿ. ದಾಳಿ ಕುರಿತು ಪ್ರತಿಕ್ರಿಯಿಸಿ ‘ಅವರಿಗೆ ಇರುವ ಮಾಹಿತಿ, ದೂರಿನ ಆಧಾರದ ಮೇಲೆ ಸಂವಿಧಾನಬದ್ಧವಾಗಿ ತನಿಖೆ ನಡೆಸಲು ಮುಕ್ತ ಅವಕಾಶ ಇದೆ. ಅದನ್ನು ಯಾರೂ ಪ್ರಶ್ನಿಸಲು ಆಗದು. ಆದರೆ ಯಾವುದೇ ತನಿಖೆ ರಾಜಕೀಯ ಪ್ರೇರಿತವಾಗಿ ನಡೆದರೆ ಅದು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಿದ ಹಾಗೆ’ ಎಂದರು.
ಇ.ಡಿ.ಯಿಂದ ₹100 ಕೋಟಿ ಮೌಲ್ಯದ ಮುಡಾ ನಿವೇಶನಗಳ ಮುಟ್ಟುಗೋಲು ಕುರಿತು ಪ್ರತಿಕ್ರಿಯಿಸಿ ‘ಸದ್ಯ ತನಿಖೆ ನಡೆದಿದೆ. ಯಾವುದು ಸರಿಯಿಲ್ಲ ಎಂದು ತನಿಖೆಯಿಂದ ಹೊರಬರಲಿದೆ. ನಂತರ ಕ್ರಮ ಜರುಗಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.