ADVERTISEMENT

ಪಿರಿಯಾಪಟ್ಟಣ | ‘ಮಧುಬಲೆ’ ಬೀಸಿ ₹10 ಲಕ್ಷಕ್ಕೆ ಬೇಡಿಕೆ: ಕಾನ್‌ಸ್ಟೆಬಲ್‌ ಬಂಧನ

ಜವಳಿ ವರ್ತಕನಿಂದ ₹10 ಲಕ್ಷಕ್ಕೆ ಬೇಡಿಕೆ; ಇಬ್ಬರ ವಿರುದ್ಧ ಪ್ರಕರಣ, ಮೂವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:00 IST
Last Updated 16 ಜೂನ್ 2025, 16:00 IST
ಶಿವಣ್ಣ
ಶಿವಣ್ಣ   

ಪಿರಿಯಾಪಟ್ಟಣ: ತಾಲ್ಲೂಕಿನ ಕಂಪಲಾಪುರ ಗ್ರಾಮದ ಜವಳಿ ವರ್ತಕರೊಬ್ಬರಿಗೆ ‘ಮಧುಬಲೆ’ ಬೀಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದ ಪ್ರಕರಣದಲ್ಲಿ ಪೊಲೀಸರು, ಕಾನ್‌ಸ್ಟೆಬಲ್‌ ಒಬ್ಬರನ್ನು ಬಂಧಿಸಿದ್ದಾರೆ. ಇತರ ಮೂವರ ಪತ್ತೆಗೆ ಬಲೆ ಬೀಸಿದ್ದಾರೆ.

ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಶಿವಣ್ಣ ಬಂಧಿತ.

ಇವರು ಹಾಗೂ ಇತರ ನಾಲ್ವರು, ‌‌ಜವಳಿ ವರ್ತಕ ದಿನೇಶ್ ಅವರನ್ನು ಮಧುಬಲೆಗೆ ಬೀಳಿಸಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ಸಂಬಂಧ ಕಾನ್‌ಸ್ಟೆಬಲ್‌ ಶಿವಣ್ಣ ಹಾಗೂ ಮೂರ್ತಿ ವಿರುದ್ಧ ಬೈಲಕುಪ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

‌‌ಜವಳಿ ವರ್ತಕ ದಿನೇಶ್ ಹನಿಟ್ರ್ಯಾಪ್‌ಗೆ ಒಳಗಾದವರು.

ಕೆಲ ದಿನಗಳ ಹಿಂದೆ ದಿನೇಶ್ ಅವರ ಬಟ್ಟೆ ಅಂಗಡಿಗೆ ಬಂದಿದ್ದ 23 ವರ್ಷದ ಯುವತಿಯೊಬ್ಬರು ಕೆಲವು ಬಟ್ಟೆಗಳನ್ನು ಖರೀದಿಸಿ, ಇನ್ನೂ ಉತ್ತಮ ಬಟ್ಟೆ ಬಂದಾಗ ಫೋನ್‌ ಕರೆ ಮಾಡುವೆ ಎಂದು ದಿನೇಶ್‌ ಅವರ ನಂಬರ್‌ ಪಡೆದಿ‌ದ್ದರು.

ನಂತರ ಇಬ್ಬರ ನಡುವೆ ಮೊಬೈಲ್‌ ಸಂದೇಶದ ಮೂಲಕ ಸಲುಗೆ ಬೆಳೆದಿತ್ತು.

‘ಜೂನ್‌ 14ರಂದು ವಾಟ್ಸ್‌ಆ್ಯಪ್‌ ಕರೆ ಮಾಡಿ ಮರಡಿಯೂರು ಗ್ರಾಮದ ಮನೆಗೆ ಬನ್ನಿ ಎಂದು ಕರೆದಿದ್ದು, ಅಲ್ಲಿಗೆ ಹೋದಾಗ ಮೂವರು ಬಂದು ಹಲ್ಲೆ ಮಾಡಿ, ಅರೆ ಬೆತ್ತಲೆಯಾಗಿಸಿ ಯುವತಿಯೊಂದಿಗೆ ಫೋಟೋ ಹಾಗೂ ವಿಡಿ‌ಯೊ ಚಿತ್ರೀಕರಿಸಿದ್ದರು. ಸ್ವಲ್ಪ ಸಮಯದ ನಂತರ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಶಿವಣ್ಣ ಹಾಗೂ ಮೂರ್ತಿ ಎನ್ನುವವರು ಬಂದು ಅವರೊಂದಿಗೆ ಮಾತನಾಡುತ್ತೇವೆ ಎಂದು ನಂಬಿಸಿದ್ದಾರೆ. ನಂತರ ₹ 10 ಲಕ್ಷ ಕೊಟ್ಟರೆ ನಿಮ್ಮನ್ನು ಬಿಡುಗಡೆ ಮಾಡಿಸುತ್ತೇವೆ. ಇಲ್ಲದಿದ್ದರೆ ವಿಡಿಯೊ ಹಾಗೂ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಸಿದ್ದರು. ಅದಕ್ಕೆ ಒಪ್ಪಿ ನನ್ನ ಸಹೋದರನಿಗೆ ಕರೆ ಮಾಡಿ ‌₹ 10 ಲಕ್ಷ ತರುವಂತೆ ತಿಳಿಸಿದ್ದೆ. ಸಹೋದರನಿಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದ. ಪೊಲೀಸರು ಬೆದರಿಸಿದಾಗ ಆರೋಪಿಗಳು ನನ್ನನ್ನು ಬಿಡುಗಡೆ ಮಾಡಿದ್ದರು’ ಎಂದು ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿ‌ದ್ದಾರೆ.

ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.