ADVERTISEMENT

2.47 ಲಕ್ಷ ಪ್ಲಾಟ್‌ಗಳಲ್ಲಿ ಬೆಳೆ ಸಮೀಕ್ಷೆ

ಚುರುಕುಗೊಳ್ಳದ ಪ್ರಕ್ರಿಯೆ; ಮೈಸೂರು ಜಿಲ್ಲೆಯ ಬಹುತೇಕ ರೈತರಲ್ಲಿ ನಿರಾಸಕ್ತಿ

ಡಿ.ಬಿ, ನಾಗರಾಜ
Published 1 ಸೆಪ್ಟೆಂಬರ್ 2020, 7:48 IST
Last Updated 1 ಸೆಪ್ಟೆಂಬರ್ 2020, 7:48 IST
ಎಚ್‌.ಡಿ.ಕೋಟೆ ತಾಲ್ಲೂಕಿನ ಗ್ರಾಮದಲ್ಲಿ ಹತ್ತಿ ಬೆಳೆಯ ಸಮೀಕ್ಷೆ ನಡೆಸಿದ ರೈತರು
ಎಚ್‌.ಡಿ.ಕೋಟೆ ತಾಲ್ಲೂಕಿನ ಗ್ರಾಮದಲ್ಲಿ ಹತ್ತಿ ಬೆಳೆಯ ಸಮೀಕ್ಷೆ ನಡೆಸಿದ ರೈತರು   

ಮೈಸೂರು: ಕೃಷಿ ಇಲಾಖೆ ರೂಪಿಸಿರುವ ಮುಂಗಾರು ಹಂಗಾಮಿನ ಸ್ವಯಂ ಬೆಳೆ ಸಮೀಕ್ಷೆಗೆ, ಜಿಲ್ಲೆಯ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಜವಾಬ್ದಾರಿಯನ್ನು ಕೃಷಿ ಇಲಾಖೆ ಆಯಾ ಜಮೀನಿನ ರೈತರಿಗೆ ನೀಡಿದೆ. ಆ.10ರಂದು ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ತಿಂಗಳ ಕೊನೆಗೆ 2.47 ಲಕ್ಷ ಪ್ಲಾಟ್‌ (ಜಮೀನು)ಗಳಲ್ಲಿ ಮಾತ್ರ ಸಮೀಕ್ಷೆ ಪೂರ್ಣಗೊಂಡಿದೆ.

ಜಿಲ್ಲೆಯಾದ್ಯಂತ ಕೃಷಿ ಇಲಾಖೆ 10,53,978 ಪ್ಲಾಟ್‌ಗಳನ್ನು ಗುರುತಿಸಿದೆ. ಈ ಪ್ಲಾಟ್‌ಗಳಲ್ಲಿನ ಬೆಳೆಯ ವಿವರವನ್ನು ಆಯಾ ಜಮೀನಿನ ಒಡೆತನ ಹೊಂದಿರುವ ರೈತರೇ, ಇದೇ ಉದ್ದೇಶಕ್ಕಾಗಿ ಇಲಾಖೆ ಅಭಿವೃದ್ಧಿ ಪಡಿಸಿರುವ ಬೆಳೆ ಸಮೀಕ್ಷೆ ಆ್ಯಪ್‌ (farmers crop survey app 2020-21)ನಲ್ಲಿ ಅಪ್‌ಲೋಡ್‌ ಮಾಡಬೇಕಿತ್ತು. ಆದರೆ ಇದೂವರೆಗೂ ಶೇ 23.43ರಷ್ಟು ಮಾತ್ರ ಅಪ್‌ಲೋಡ್‌ ಆಗಿದೆ ಎಂಬುದು ಕೃಷಿ ಇಲಾಖೆಯ ಅಂಕಿ–ಅಂಶಗಳಿಂದ ಖಚಿತಪಟ್ಟಿದೆ.

ADVERTISEMENT

‘ಸಮೀಕ್ಷೆ ಬಗ್ಗೆ ಮಾಹಿತಿಯೇ ಇಲ್ಲ. ಏನು ಮಾಡಿದರೇನು ಪ್ರಯೋಜನ ? ನಮಗೆ ಮೂರು ಕಾಸಿನ ಉಪಯೋಗವಾಗಲ್ಲ. ನಮ್ಮ ಸಂಕಷ್ಟ ಎಂದಿಗೂ ತಪ್ಪಲ್ಲ. ನಿತ್ಯವೂ ಮೈ ಮುರಿದು ದುಡಿದರೂ ನಮ್ಮ ಗೋಳು ಬಗೆಹರಿಯಲ್ಲ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯ ರೈತ ಬಸವರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬಹುತೇಕ ರೈತರಿಗೆ ಬೆಳೆ ಸಮೀಕ್ಷೆ ನಡೆದಿರುವ ಮಾಹಿತಿಯೇ ಇಲ್ಲ. ಹೇಗೆ ಮಾಡಬೇಕು ಎಂಬುದು ಗೊತ್ತು ಇಲ್ಲ. ಆದ್ದರಿಂದ ನಮ್ಮ ಭಾಗದಲ್ಲಿ ಈ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಇಲಾಖೆ ಸಮೀಕ್ಷೆ ಮಾಡಿ ಏನು ಮಾಡಲಿದೆ ? ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡುತ್ತದೆಯಾ..? ನಷ್ಟವಾದರೇ ಸಕಾಲಕ್ಕೆ ಪರಿಹಾರ ಕೊಡುತ್ತದಾ..?’ ಎಂದು ರೈತ ಮುಖಂಡ ಪಿ.ಮರಂಕಯ್ಯ ಪ್ರಶ್ನಾವಳಿಯನ್ನೇ ಪ್ರಸ್ತಾಪಿಸಿದರು.

ಬೆಳೆ ಸಮೀಕ್ಷೆ ಕುರಿತಂತೆ...

‘ರೈತರು ತಮ್ಮ ಜಮೀನಿನ ಸರ್ವೆ ನಂಬರ್‌ ಮತ್ತು ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳನ್ನು ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸಬೇಕು’ ಎನ್ನುತ್ತಾರೆ ಜಿಲ್ಲಾ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಸ್‌.ನಾಗೇಂದ್ರ.

‘ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್‌ವಾರು ಬೆಳೆ ಪರಿಶೀಲನೆ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡುವಾಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಈ ಸಮೀಕ್ಷೆಯಲ್ಲಿನ ದತ್ತಾಂಶ ಪೂರಕವಾಗಲಿದೆ’ ಎಂದು ಹೇಳಿದರು.

‘ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಇದೀಗ ನಡೆಸುವ ಬೆಳೆಸಮೀಕ್ಷೆಯ ಮಾಹಿತಿಯನ್ನೇ ಆಧಾರವಾಗಿ ಬಳಸಲಾಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.