ADVERTISEMENT

ಭಾರತದಲ್ಲಿ ಎಲ್ಲವೂ ಇದೆ; ಪ್ರಮೋಟ್ ಬೇಕಿದೆ

ಆರೇಳು ತಿಂಗಳು ಮುಂಚೆಯೇ ವಿದೇಶಗಳಲ್ಲಿ ದಸರಾ ಪ್ರಚಾರ; ಸಚಿವ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 15:13 IST
Last Updated 27 ಸೆಪ್ಟೆಂಬರ್ 2019, 15:13 IST
ಮೈಸೂರಿನ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಶುಕ್ರವಾರ ಸಂಜೆ ಮೈಸೂರು ದಸರಾ ಕಲಾ ವೈಭವ ಉದ್ಘಾಟಿಸಿದ ಸಚಿವ ಸಿ.ಟಿ.ರವಿ ಜಮ್ಮು ಮತ್ತು ಕಾಶ್ಮೀರದ ಮಳಿಗೆಯೊಂದಕ್ಕೆ ಭೇಟಿ ನೀಡಿ ಕಾಶ್ಮೀರಿ ಶಾಲನ್ನು ವೀಕ್ಷಿಸಿದರು
ಮೈಸೂರಿನ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಶುಕ್ರವಾರ ಸಂಜೆ ಮೈಸೂರು ದಸರಾ ಕಲಾ ವೈಭವ ಉದ್ಘಾಟಿಸಿದ ಸಚಿವ ಸಿ.ಟಿ.ರವಿ ಜಮ್ಮು ಮತ್ತು ಕಾಶ್ಮೀರದ ಮಳಿಗೆಯೊಂದಕ್ಕೆ ಭೇಟಿ ನೀಡಿ ಕಾಶ್ಮೀರಿ ಶಾಲನ್ನು ವೀಕ್ಷಿಸಿದರು   

ಮೈಸೂರು: ‘ಭಾರತದಲ್ಲಿ ಸಕಲವೂ ಇದೆ. ಕ್ರಿಯೇಟ್‌ ಮಾಡುವಂತದ್ದೇನು ಇಲ್ಲ. ನಮ್ಮಲ್ಲಿರೋದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಬೇಕಿದೆಯಷ್ಟೇ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

‘ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿಯಾಗಿರುವೆ’ ಎಂದು ಶುಕ್ರವಾರ ಸಂಜೆ ನಗರದ ಹೊರವಲಯದಲ್ಲಿನ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಮೈಸೂರು ದಸರಾ ಕಲಾ ವೈಭವ ಉದ್ಘಾಟಿಸಿದ ಬಳಿಕ ಮಾಧ್ಯಮದವರಿಗೆ ತಿಳಿಸಿದರು.

‘ಮುಂದಿನ 50 ವರ್ಷ ಮೈಸೂರು ದಸರಾ ಯಾವಾಗ ನಡೆಯಲಿದೆ ಎಂಬುದು ಪಂಚಾಂಗ ನೋಡಿದರೆ ದಿನ ಸಿಗಲಿದೆ. ಇದರ ಆಧಾರದಲ್ಲೇ ಆರೇಳು ತಿಂಗಳು ಮುಂಚಿತವಾಗಿ ವಿದೇಶದಲ್ಲಿ, ನಾಲ್ಕೈದು ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಬಗ್ಗೆ ಪ್ರಚಾರ ನಡೆಸಲು ಇಲಾಖೆ ಯೋಜಿಸಿದೆ’ ಎಂದು ಇದೇ ಸಂದರ್ಭ ಹೇಳಿದರು.

ADVERTISEMENT

‘ಮೈಸೂರು ಪಾರಂಪರಿಕ ನಗರ. ಇಲ್ಲಿ 180ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದು, ಇವುಗಳನ್ನು ಉಳಿಸುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದ ಅಭಿವೃದ್ಧಿ ಮಾಡಲಾಗುವುದು’ ಎಂದು ಸಿ.ಟಿ.ರವಿ ತಿಳಿಸಿದರು.

ಹೊಸ ಅನುಭವದ ಸ್ಪರ್ಶ: ದಸರೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ಅನುಭವ ದಕ್ಕಿಸಿಕೊಡಲು ಪ್ರವಾಸೋದ್ಯಮ ಇಲಾಖೆ ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ವಿಭಿನ್ನ ಕಾರ್ಯಕ್ರಮ ರೂಪಿಸಿದೆ ಎಂದು ಸಚಿವರು ಹೇಳಿದರು.

‘ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ರಾಮನಗರದಲ್ಲಿ ‘ನೇಟಿವ್‌ ಫುಡ್‌’ ಹೆಸರಿನಲ್ಲಿ ಸ್ಥಳೀಯ ತಟ್ಟೆ ಇಡ್ಲಿ, ರಾಗಿ ಮುದ್ದೆಯೂಟದ ರುಚಿ ಉಣಬಡಿಸಲಾಗುವುದು. ಮಂಡ್ಯ ಜಿಲ್ಲೆಯ ಶ್ರೀನಿವಾಸ ಅಗ್ರಹಾರದಲ್ಲಿ ಕೃಷಿ ಸಂಸ್ಕೃತಿ, ಹಳ್ಳಿಯ ಚಿತ್ರಣ ಪರಿಚಯ ಮಾಡಿಕೊಡಲು ಸಕಲ ಸಿದ್ಧತೆ ನಡೆಸಲಾಗಿದೆ’ ಎಂದು ತಿಳಿಸಿದರು.

‘ಅಲೆಮನೆ, ಕಬ್ಬು, ಸಿರಿಧಾನ್ಯಗಳ ಆಹಾರ, ದಂಟು, ಎತ್ತಿನ ಗಾಡಿ ಓಡಿಸುವಿಕೆ, ಕುರಿ ಮೇಯಿಸುವುದು, ತೊಟ್ಟಿ ಮನೆಯಲ್ಲಿ ಫೋಟೊ ಶೂಟ್‌ ಸೇರಿದಂತೆ ಇನ್ನಿತರೆ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಕನಿಷ್ಠ ಶುಲ್ಕ ನಿಗದಿಪಡಿಸಿದ್ದು, ಆದಾಯವನ್ನು ರೈತರಿಗೆ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.