ADVERTISEMENT

ರಾಷ್ಟ್ರೀಯ ವಿಪತ್ತು ಘೋಷಿಸಿ; ಮಾನದಂಡ ಬದಲಾಯಿಸಿ

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅ.23ರಂದು ಧರಣಿ: ಬಡಗಲಪುರ ನಾಗೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 16:29 IST
Last Updated 20 ಅಕ್ಟೋಬರ್ 2020, 16:29 IST

ಮೈಸೂರು: ‘ಉತ್ತರ ಕರ್ನಾಟಕದಲ್ಲಿನ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದು ಸೇರಿದಂತೆ ಎನ್‌ಡಿಆರ್‌ಎಫ್‌ ಮಾನದಂಡ‌ ಬದಲಾಯಿಸುವಂತೆ ಆಗ್ರಹಿಸಿ ಅ.23ರ ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಪ್ರವಾಹದ ಕುರಿತು ಕೇಂದ್ರ–ರಾಜ್ಯ ಸರ್ಕಾರ ತಾಳಿರುವ ನಿರ್ಲಕ್ಷ್ಯ ಧೋರಣೆಯನ್ನು ಸಂಘ ಖಂಡಿಸುತ್ತಿದೆ. ಉತ್ತರ ಕರ್ನಾಟಕ ಸತತ ಆರು ವರ್ಷಗಳಿಂದ ಬರ ಎದುರಿಸಿದೆ. ಮೂರು ವರ್ಷಗಳಿಂದ ಪ್ರವಾಹ, ನೆರೆಯಿಂದ ತತ್ತರಿಸಿದೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಸಂಖ್ಯಾತ ಜನರು ಮನೆ, ಆಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಕೇಂದ್ರ–ರಾಜ್ಯ ಸರ್ಕಾರ ಜನರಿಗೆ ಸೂರು ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ. ಸಂತ್ರಸ್ತರಿಗೆ ಭಿಕ್ಷೆ ರೂಪದಲ್ಲಿ ಪರಿಹಾರ ನೀಡುವ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳನ್ನು ಈ ಕೂಡಲೇ ಬದಲಾಯಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಈಗಿರುವ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಒಂದು ಎಕರೆಯಲ್ಲಿ ಕಬ್ಬು ನಾಶವಾದರೆ ₹ 2 ಸಾವಿರ ಪರಿಹಾರ ನೀಡುತ್ತಿದ್ದಾರೆ. ಈ ಅವೈಜ್ಞಾನಿಕ ಮಾರ್ಗಸೂಚಿ ಬದಲಿಸಿ, ವೈಜ್ಞಾನಿಕವಾಗಿ ನಷ್ಟ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಪುನರ್ ಮನೆ ನಿರ್ಮಾಣ ಮಾಡಿ ಕೊಡಬೇಕು. ಪ್ರವಾಹದಿಂದ ಹದಗೆಟ್ಟಿರುವ ಕೃಷಿ ಭೂಮಿಯನ್ನು ವ್ಯವಸಾಯಕ್ಕೆ ಯೋಗ್ಯವಾಗಿ ಪರಿವರ್ತಿಸಬೇಕು.

ಆ ಭಾಗದ ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕು. ರೈತರ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿಯನ್ನು ಕೂಡಲೇ ಪಾವತಿಸಬೇಕು. ಬೆಳೆ ವಿಮೆ ಪರಿಹಾರ, ಸಬ್ಸಿಡಿ ಹಣ ಸೇರಿ ಮೊದಲಾದವುಗಳನ್ನು ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸುವಂತೆ ಆಗ್ರಹಿಸಿ ಪ್ರತಿಭಟಿಸಲಾಗುವುದು’ ಎಂದು ನಾಗೇಂದ್ರ ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ಆಂಧ್ರಪ್ರದೇಶ ಸರ್ಕಾರ ತನ್ನ ರಾಜ್ಯದ ತಂಬಾಕು ಬೆಳೆಗಾರರಿಗೆ ಸ್ಪಂದಿಸಿ, ಉತ್ಪಾದನೆಯ ಶೇ 35ರಷ್ಟನ್ನು ತಾನೇ ನೇರವಾಗಿ ಖರೀದಿಸಿದೆ. ಅದೇ ರೀತಿ ರಾಜ್ಯದ ತಂಬಾಕು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರವೂ ಸ್ಪಂದಿಸಬೇಕು. ತಂಬಾಕಿನ ಬೆಲೆ ಏರಿಕೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಅ.23ರ ಬೆಳಿಗ್ಗೆ 11ಕ್ಕೆ ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸುತ್ತೇವೆ’ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಶೆಟ್ಟಹಳ್ಳಿ ಚಂದ್ರೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.