ADVERTISEMENT

ನ.7ರಂದು ಅಹಿಂದ ಮುಖಂಡರ ‘ದೆಹಲಿ ಚಲೋ’

‘ಸಿದ್ದರಾಮಯ್ಯ ಪದಚ್ಯುತಿಗೆ ಕೇಂದ್ರದ ಪಿತೂರಿ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:02 IST
Last Updated 26 ಅಕ್ಟೋಬರ್ 2024, 0:02 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸಿದ್ದು, ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿ ಅಹಿಂದ ಮುಖಂಡರು ನವೆಂಬರ್ 7ರಂದು ದೆಹಲಿ ಚಲೋ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಮುದಾಯವು ನಗರದಲ್ಲಿ ಶುಕ್ರವಾರ ಜಂಟಿಯಾಗಿ ಏರ್ಪಡಿಸಿದ್ದ ದುಂಡುಮೇಜಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಂದು ಬೆಳಿಗ್ಗೆ 11ಕ್ಕೆ ಪ್ರತಿಭಟನೆ ನಡೆಸಲಿದ್ದಾರೆ.

ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್‌ ಮಾತನಾಡಿ, ‘ಶೋಷಿತರ ಧ್ವನಿಯಾಗಿ ಕೆಲಸ ಮಾಡುವವರನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸ ರಾಜ್ಯ ರಾಜಕಾರಣದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯ ವಿರುದ್ಧವೂ ಮುಂದುವರೆದಿದೆ. ರಾಷ್ಟ್ರಪತಿಯೂ ತಟಸ್ಥವಾದರೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರದ ಕಪಿಮುಷ್ಠಿಯಲ್ಲಿರುವ ಸಿಬಿಐ, ಇಡಿ, ಐಟಿ ತನಿಖಾ ಸಂಸ್ಥೆಗಳಲ್ಲಿರುವ ಲೋಪ, ದೋಷಗಳ ಕುರಿತ ತನಿಖೆಗಾಗಿ ನ್ಯಾಯಾಂಗ ಆಯೋಗ ರಚಿಸಬೇಕು ಎಂಬುದೂ ನಮ್ಮ ಆಗ್ರಹ. ಅಭಿಯಾನದಲ್ಲಿ ಪ್ರೊ.ಬಂಜಗೆರೆ ಜಯಪ್ರಕಾಶ್‌, ದಿನೇಶ್‌ ಅಮೀನ್‌ ಮಟ್ಟು, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಕೆ.ಎಸ್‌.ಭಗವಾನ್‌, ವಸುಂಧರಾ ಭೂಪತಿ, ನಾ.ದಿವಾಕರ್‌ ಭಾಗವಹಿಸಲಿದ್ದಾರೆ’ ಎಂದು ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.