ADVERTISEMENT

ಮೈಸೂರು: 'ಬಸ್‌ ಪಾಸ್ ಅವಧಿ ವಿಸ್ತರಿಸಿ'

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:59 IST
Last Updated 30 ಜೂನ್ 2022, 14:59 IST

ಮೈಸೂರು: ‘ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಮೆಡಿಕಲ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸ್‌ನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಬೇಕು’ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ರಾಜ್ಯದ 2ನೇ ಮತ್ತು 3ನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ಅನ್ನು 2021ರ ಸೆಪ್ಟಂಬರ್‌ನಲ್ಲಿ ನೀಡಲಾಗಿತ್ತು. ಆದರೆ, ಅವರ ತರಗತಿಗಳು ನವೆಂಬರ್‌ನಲ್ಲಿ ಆರಂಭವಾದವು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ 2021ರ ಡಿಸೆಂಬರ್‌ನಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸ್‌ಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ನಿಗಮವು ಪಾಸ್ ಜೂನ್‌ಗೆ ಕೊನೆಗೊಳ್ಳಲಿದೆ ಎಂದು ಏಕಾಏಕಿ ಹೇಳಿದೆ. ಈ ಕ್ರಮ ಖಂಡನೀಯವಾದುದು’ ಎಂದಿದ್ದಾರೆ.

‘ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ, ಪಾಸ್ ಮಾನ್ಯತೆ ರದ್ದಾಗಿದೆ; ದುಡ್ಡು ಕೊಟ್ಟು ಓಡಾಡಬೇಕು ಎಂಬುದು ವಿದ್ಯಾರ್ಥಿ ವಿರೋಧಿ ಮತ್ತು ಅಪ್ರಜಾತಂತ್ರಿಕವಾಗಿದೆ’ ಎಂದು ಖಂಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.