ADVERTISEMENT

ಬ್ರಾಹ್ಮಣ ಸಮಾಜ ಶಿಕ್ಷಣದಿಂದ ಸರ್ವರಿಗೂ ಮಾದರಿ

ಜಿಲ್ಲಾಮಟ್ಟದ ಬ್ರಾಹ್ಮಣರ ಸಮಾವೇಶದಲ್ಲಿ ಸಚಿವ ಜಿ.ಟಿ.ದೇವೇಗೌಡ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 16:54 IST
Last Updated 16 ಡಿಸೆಂಬರ್ 2018, 16:54 IST
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ಸ್ವಾಮೀಜಿ, ಜಿ.ಟಿ.ದೇವೇಗೌಡ, ಎಚ್‌.ವಿ.ರಾಜೀವ್, ಡಿ.ಟಿ.ಪ್ರಕಾಶ್‌ ಇದ್ದಾರೆ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ಸ್ವಾಮೀಜಿ, ಜಿ.ಟಿ.ದೇವೇಗೌಡ, ಎಚ್‌.ವಿ.ರಾಜೀವ್, ಡಿ.ಟಿ.ಪ್ರಕಾಶ್‌ ಇದ್ದಾರೆ   

ಮೈಸೂರು: ಸರ್ಕಾರದ ನೀತಿಯಿಂದಾಗಿ ಬ್ರಾಹ್ಮಣರು ಸಂಕಷ್ಟ ಅನುಭವಿಸಿದರೂ, ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಎರಡು ದಿನ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಯಾದ ಬಳಿಕ ಹಲವು ಬ್ರಾಹ್ಮಣರು ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದರು. ಆದರೆ ಈ ಹಿನ್ನಡೆಯಿಂದ ಬೇಗನೇ ಎದ್ದುಬಂದರು ಎಂದರು.

ADVERTISEMENT

ಬಡವರ ಹಿತದೃಷ್ಟಿಯಿಂದ ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದರಿಂದ ಹಲವರು ಭೂಮಿಯ ಒಡೆಯರಾದರು. ಆದರೆ ಜಮೀನು ಪಡೆದವರಲ್ಲಿ ಬಹುಪಾಲು ಮಂದಿ ಅದನ್ನು ಸದುಪಯೋಗಪಡಿಸಲು ವಿಫಲರಾಗಿ, ಜಮೀನು ಕಳೆದುಕೊಂಡು ಬೀದಿಪಾಲಾದರು. ಆದರೆ ಈ ಕಾಯ್ದೆಯಿಂದ ಜಮೀನು ಕಳೆದುಕೊಂಡ ಬ್ರಾಹ್ಮಣರು ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿದರು. ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲೂ ನೆಲೆಸಿದ್ದಾರೆ ಎಂದು ಹೇಳಿದರು.

ಈ ಕಾಯ್ದೆ ಜಾರಿಗೆ ಬರುವ ಮುನ್ನ ಬ್ರಾಹ್ಮಣರ ಕೈಯಲ್ಲಿ ಇದ್ದ ಜಮೀನನ್ನು ರೈತರಿಗೆ ವಾರ್ಷಿಕ ಗುತ್ತಿಗೆ ನೀಡುತ್ತಿದ್ದರು. ಬಂದ ಬೆಳೆಯಲ್ಲಿ ಇಬ್ಬರೂ ತೃಪ್ತಿಯಿಂದ ಜೀವನ ನಡೆಸುತ್ತಿದ್ದರು. ಆ ತೃಪ್ತಿ ಈಗ ಇದೆಯಾ ಎಂದು ಪ್ರಶ್ನಿಸಿದರು.

ಬ್ರಾಹ್ಮಣರಲ್ಲೂ ಬಡವರಿದ್ದಾರೆ. ಆದರೆ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಾರೆ. ದಾಸೋಹ, ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಬ್ರಾಹ್ಮಣರು ಮುಂಚೂಣಿಯಲ್ಲಿ ನಿಲ್ಲುವರು ಎಂದು ಬಣ್ಣಿಸಿದರು.

ಸಮಾವೇಶಕ್ಕೆ ತೆರೆ: ಎರಡು ದಿನಗಳ ಸಮಾವೇಶಕ್ಕೆ ಭಾನುವಾರ ತೆರೆಬಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರರನ್ನು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ‘ಸುಧರ್ಮ’ ಪತ್ರಿಕೆಯ 49ನೇ ವರ್ಷದ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಂತಿಮ ದಿನ ಔದ್ಯಮಿಕ ಗೋಷ್ಠಿ ಮತ್ತು ಶೈಕ್ಷಣಿಕ ಗೋಷ್ಠಿ ಆಯೋಜಿಸಲಾಗಿತ್ತು.

ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ಸ್ವಾಮೀಜಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ, ಉಪಾಧ್ಯಕ್ಷ ಆರ್‌.ಲಕ್ಷ್ಮೀಕಾಂತ್, ಅಖಿಲ ಭಾರತ ಬ್ರಾಹ್ಮಣ ಸಮಾಜದ ವಕ್ತಾರ ಡಾ.ಕೆ.ಪಿ.ಪುತ್ತೂರಾಯ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮುಖಂಡರಾದ ಎಂ.ಕೃಷ್ಣದಾಸ ಪುರಾಣಿಕ್, ಅಪೂರ್ವ ಸುರೇಶ್, ಮ.ವಿ.ರಾಮಪ್ರಸಾದ್, ಶಂಕರ ನಾರಾಯಣ, ಗೋಪಾಲ್‌ರಾವ್, ಕೆ.ರಮೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.