ADVERTISEMENT

ಚಕ್ರ ತಿರುಗಲಿದೆ, ಕಾಲ ಬರಲಿದೆ: ಯಡಿಯೂರಪ್ಪಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:02 IST
Last Updated 8 ನವೆಂಬರ್ 2019, 10:02 IST
ಮೈಸೂರಿನಲ್ಲಿ ಗುರುವಾರ ಡಿ.ಕೆ.ಶಿವಕುಮಾರ್‌ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಭವನಕ್ಕೆ ಕರೆತರಲಾಯಿತು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಗುರುವಾರ ಡಿ.ಕೆ.ಶಿವಕುಮಾರ್‌ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಭವನಕ್ಕೆ ಕರೆತರಲಾಯಿತು –ಪ್ರಜಾವಾಣಿ ಚಿತ್ರ   

ಮೈಸೂರು: ‘ರಾಜಕಾರಣದ ಚಕ್ರವನ್ನು ಹೇಗೆ ತಿರುಗಿಸಬೇಕೆಂಬುದು ನನಗೂ ಗೊತ್ತಿದೆ. ಅಂಥ ಕಾಲ ಬರಲಿದೆ. ಮೇಲೇರಿದ ಸೂರ್ಯ ಕೆಳಗಿಳಿಯಲೇಬೇಕು’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಗುರುವಾರ ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಸಿಗಬೇಕಿದ್ದ ವೈದ್ಯಕೀಯ ಕಾಲೇಜನ್ನೇ ಕಿತ್ತುಕೊಂಡಿದ್ದಾರೆ. ಇನ್ನು ಇತರ ಶಾಸಕರ ಅನುದಾನ ಕಿತ್ತುಕೊಂಡಿರುವುದು ಯಾವ ಲೆಕ್ಕ’ ಎಂದರು.

‘ಯಾರು ಯಾರನ್ನು ಬೆಳೆಸಿದ್ದೇನೆ ಎಂಬುದನ್ನ ನಾನು ಇದುವರೆಗೆ ಹೇಳಿಕೊಂಡಿಲ್ಲ. ನನ್ನ ಸ್ಟೈಲೇ ಬೇರೆ, ವಿಚಾರವೇ ಬೇರೆ. ಡಿಕೆಶಿ ಕರ್ನಾಟಕದ ಆಸ್ತಿ. ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಹಾಗೇನಾದರೂ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.

ADVERTISEMENT

‘ಮೈಸೂರಿನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸುವ ವಿಚಾರ ನನಗೆ ಗೊತ್ತಾಗಲಿಲ್ಲ. ಗೊತ್ತಿದ್ದರೆ ಸಿದ್ದರಾಮಯ್ಯ ಹಾಗೂ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೂ ಬರಲು ಹೇಳುತ್ತಿದ್ದೆ’ ಎಂದು ನುಡಿದರು.

ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೈಸೂರಿಗೆ ಬಂದಿಳಿದ ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ರೈಲ್ವೆ ನಿಲ್ದಾಣದಿಂದ ಕಾಂಗ್ರೆಸ್‌ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಕ್ರೇನ್‌ ನೆರವಿನಿಂದ ಸೇಬಿನ ಹಾರ ಹಾಕಿದರು. ಜೆಡಿಎಸ್‌ ಕಾರ್ಯಕರ್ತರೂ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ನಂಜನಗೂಡು ದೇಗುಲ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡಿದರು.

ಡಿಕೆಶಿ ಮುಂದಿನ ಸಿ.ಎಂ: ತನ್ವೀರ್‌

ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.

‘ಶಿವಕುಮಾರ್‌ ಕಾಂಗ್ರೆಸ್‌ ಪಕ್ಷ ಮುನ್ನಡೆಸಬೇಕು. ಅವರ ಜೊತೆಗೆ ನಾವು ಇರುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್‌, ‘ನಮಗೆ ಭಗವಂತನಿಗಿಂತ ಹೆಚ್ಚು ನಂಬಿಕೆ ಡಿ.ಕೆ ಸಾಹೇಬ್ರ ಮೇಲಿದೆ‍. ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಕಾಂಗ್ರೆಸ್‌ನ ಎರಡು ಕಣ್ಣುಗಳು’ ಎಂದರು.

ಕಪಾಳಮೋಕ್ಷ: ರೈಲು ನಿಲ್ದಾಣದೊಳಗೆ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರೊಬ್ಬರಿಗೆ ತನ್ವೀರ್‌ ಕಪಾಳಮೋಕ್ಷ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.