ADVERTISEMENT

ಸವಾಲಿನಿಂದ ಹಿಂದೆ ಸರಿದಿಲ್ಲ; ಸಾ.ರಾ.ಮಹೇಶ್

ಸಿಬಿಐ ತನಿಖೆಗೆ ಹೆದರಲ್ಲ; ಹಳ್ಳಿ ಹಕ್ಕಿಯನ್ನು ‘ಅತೃಪ್ತ ಪ್ರೇತ’ ಎಂದು ಜರಿದ ಜೆಡಿಎಸ್ ಶಾಸಕ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 14:07 IST
Last Updated 21 ಆಗಸ್ಟ್ 2019, 14:07 IST

ಮೈಸೂರು: ‘ಅಡಗೂರು ಎಚ್.ವಿಶ್ವನಾಥ್‌ಗೆ ಹಾಕಿದ ಸವಾಲಿನಿಂದ ನಾನು ಹಿಂದೆ ಸರಿದಿಲ್ಲ’ ಎಂದು ಶಾಸಕ ಸಾ.ರಾ.ಮಹೇಶ್‌ ಪುನರುಚ್ಚರಿಸಿದರು.

‘ವಿಶ್ವನಾಥ್ ತಮ್ಮ ಮೆಚ್ಚಿನ ಕಪ್ಪಡಿ ದೇಗುಲದಲ್ಲೇ ಯಾವ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಪ್ರಮಾಣ ಮಾಡಲಿ. ನಾನು ರಾಜಕೀಯದಿಂದಲೇ ಸನ್ಯಾಸ ಪಡೆಯುವೆ. ಬೇಷರತ್‌ ಕ್ಷಮೆ ಯಾಚಿಸುವೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅತೃಪ್ತ ಪ್ರೇತಕ್ಕೆ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿಕೊಡುವ ಮೂಲಕ ಸಮಾಧಾನಗೊಳಿಸಿದೆ. ಈ ಪ್ರೇತಕ್ಕಾಗಿಯೇ ಈ ಭಾಗದ ಯಾರೊಬ್ಬರಿಗೂ ಸಚಿವ ಸ್ಥಾನ ಕೊಟ್ಟಿಲ್ಲ’ ಎಂದು ಸಾ.ರಾ.ಮಹೇಶ್ ವಿಶ್ವನಾಥ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ADVERTISEMENT

‘ಮೈಸೂರು ಭಾಗದ ಅಪವಿತ್ರ ರಾಜಕಾರಣಿಯೊಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದನ್ನು ಬಿಟ್ಟರೇ ಬೇರೆ ಯಾರೊಬ್ಬರ ಬಗ್ಗೆಯೂ ನಾನು ಲಘುವಾಗಿ ಮಾತನಾಡಲ್ಲ’ ಎಂದು ಹೇಳಿದರು.

ಸತ್ಯಾಂಶ ಬೆಳಕಿಗೆ ಬರಲಿ: ‘ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವ ಮೂಲಕ ಜೆಡಿಎಸ್ ಬೆದರಿಸಲು ಸಾಧ್ಯವಿಲ್ಲ. ಅದೊಂದು ಭ್ರಮೆ. ಅಪವಿತ್ರ ಸರ್ಕಾರ ರಚನೆಗಾಗಿ ನಡೆದಿರುವ ಮಾತುಕತೆಯನ್ನು ಬಹಿರಂಗಗೊಳಿಸಿ. ಯಾರಿಗೆ ಎಷ್ಟು ಹಣ ಕೊಡಲಾಗಿದೆ. ಯಾರಿಂದ ಪಡೆಯಲಾಗಿದೆ ಎಂಬ ಎಲ್ಲ ವಿವರವೂ ಬಹಿರಂಗಗೊಳ್ಳಲಿ’ ಎಂದು ಸಾ.ರಾ.ಮಹೇಶ್‌ ಆಗ್ರಹಿಸಿದರು.

‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿ, ಸಿದ್ದರಾಮಯ್ಯ ಅವಧಿಯ ಎಲ್ಲವನ್ನೂ ಸಿಬಿಐ ತನಿಖೆಗೆ ಒಳಪಡಿಸಿ, ಸತ್ಯಾಂಶ ಬಹಿರಂಗಗೊಳಿಸಿ. ರಾಜ್ಯದಲ್ಲಿ ಸ್ವಚ್ಛ ಆಡಳಿತ ನಿರ್ಮಾಣಗೊಳ್ಳಲು ಮುನ್ನುಡಿ ಬರೆಯಿರಿ’ ಎಂದು ಒತ್ತಾಯಿಸಿದರು.

ನೆರೆ ಸಂತ್ರಸ್ತರಿಗೆ ಸ್ಪಂದಿಸಿ: ‘ಹಿಂದಿನ ವರ್ಷ ನೆರೆ ಬಂದಾಗ ರೈತರ ಸಾಲ ಮನ್ನಾ ನಡುವೆಯೂ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಕ್ಷಣವೇ ಸ್ಪಂದಿಸಿದ್ದರು. ಉದಾರವಾಗಿ ನೆರವನ್ನು ಘೋಷಿಸುವ ಜತೆ ಪರಿಹಾರವನ್ನು ಒದಗಿಸಿದ್ದರು. ಜನರು ನೀಡಿದ್ದ ₹ 180 ಕೋಟಿ ಹಣದಲ್ಲಿ ₹ 90 ಕೋಟಿಯನ್ನು ಕೊಡಗಿಗೆ ಮೀಸಲಿಟ್ಟಿದ್ದರು.’

‘ಇದೀಗ ಯಡಿಯೂರಪ್ಪ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರ ನೀಡಿದ್ದ ಪರಿಹಾರದಲ್ಲಿ ಅರ್ಧದಷ್ಟನ್ನು ಘೋಷಿಸಿದ್ದಾರೆ. ಇದು ಸರಿಯಲ್ಲ. ನೆರೆ ಪೀಡಿತರಿಗೆ ತ್ವರಿತವಾಗಿ ಸ್ಪಂದಿಸಲಿ. ಕೊಡಗಿನ ಜನರ ಭಾವನೆಗೆ ಸ್ಪಂದಿಸಲು ಅಲ್ಲಿನವರನ್ನೇ ಸಚಿವರನ್ನಾಗಿ ಮಾಡಲಿ’ ಎಂದು ಆಗ್ರಹಿಸಿದರು.

ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಮಾಜಿ ಮೇಯರ್ ಆರ್.ಲಿಂಗಪ್ಪ, ಜೆಡಿಎಸ್ ಮುಖಂಡ ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.