ADVERTISEMENT

ಮೈಸೂರು| ಕಾನೂನಿನ ಅಸ್ತ್ರ ದ್ವೇಷಕ್ಕೆ ಬಳಸದಿರಿ: ಪೂರ್ಣಿಮಾ ಸಲಹೆ

ಮಹಿಳಾ ದಿನಾಚರಣೆಯಲ್ಲಿ ಕೇಂದ್ರ ಸಂವಹನ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 13:16 IST
Last Updated 19 ಮಾರ್ಚ್ 2023, 13:16 IST
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ಆವರಣದ ರಾಜೇಂದ್ರ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಉದ್ಘಾಟಿಸಿದರು. ಎಂ.ಎ.ನಿಲಾಂಬಿಕಾ, ಕೆ.ಸಿ.ದಿವ್ಯಶ್ರೀ, ಶಾರದಾ ಶಿವಲಿಂಗಸ್ವಾಮಿ ಮ.ಗು.ಸದಾನಂದಯ್ಯ ಇದ್ದರು
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ಆವರಣದ ರಾಜೇಂದ್ರ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಉದ್ಘಾಟಿಸಿದರು. ಎಂ.ಎ.ನಿಲಾಂಬಿಕಾ, ಕೆ.ಸಿ.ದಿವ್ಯಶ್ರೀ, ಶಾರದಾ ಶಿವಲಿಂಗಸ್ವಾಮಿ ಮ.ಗು.ಸದಾನಂದಯ್ಯ ಇದ್ದರು   

ಮೈಸೂರು: ‘ಮಹಿಳೆಯರು ಕಾನೂನಿನ ಅಸ್ತ್ರವನ್ನು ತಮ್ಮ ರಕ್ಷಣೆಗೆ ಬಳಸಬೇಕೆ ಹೊರತು, ಪುರುಷರ ಮೇಲಿನ ದ್ವೇಷಕ್ಕಾಗಿ ಬಳಸುವುದು ಸೂಕ್ತವಲ್ಲ. ಅದು ಧರ್ಮವೂ ಅಲ್ಲ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಹೇಳಿದರು.

ನಗರದ ಜೆಎಸ್‌ಎಸ್‌ ಆಸ್ಪತ್ರೆಯ ಆವರಣದ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳೆಯರ ರಕ್ಷಣೆಗೆ ಕಾನೂನಿದೆ. ಈ ಅಸ್ತ್ರವನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ಪುರುಷರ ಮೇಲೆ ಮಹಿಳೆಯರ ಕಾನೂನಿನ ದಾಳಿ ಜಾಸ್ತಿಯಾಗಿದೆ. ಮಹಿಳೆಯರಿಗೆ ಬವಣೆ ಇರುವಂತೆ, ಪುರುಷರಿಗೂ ಬವಣೆಗಳಿವೆ. ನಮ್ಮ ಕೈಗೆ ಕಾನೂನು ಕೊಟ್ಟಿದ್ದಾರೆ. ಕಾನೂನು ರಕ್ಷಣೆಗಿದೆ. ಆದರೆ, ಅದನ್ನು ತಮಗಾಗಿಯೇ, ತಮ್ಮ ಸೌಖ್ಯಕ್ಕಾಗಿ ಬಳಸಿಕೊಳ್ಳುವುದು ಎಷ್ಟು ಅಥವಾ ಪುರುಷರಿಗೆ ತೊಂದರೆ ಕೊಡಬೇಕೆಂದು ಬಳಸಿಕೊಳ್ಳುವುದು ಎಷ್ಟು ಎಂಬುದರ ಬಗ್ಗೆ ಮಹಿಳೆಯರು ಮನವರಿಕೆ ಮಾಡಿಕೊಳ್ಳಬೇಕು’ ಎಂದರು.

‘ಈ ಬಗ್ಗೆ ಪುರುಷರಿಗಿಂತ ಮಹಿಳೆಯರು ಧ್ವನಿ ಎತ್ತಬೇಕು. ಅಸ್ತ್ರವನ್ನು ದುರ್ಬಳಕೆ ಮಾಡಿಕೊಂಡರೆ ನಮ್ಮಿಂದ ಅದನ್ನು ಕಸಿದುಕೊಳ್ಳುವ ಸಂಭವ ಬರಬಹುದು. ಆಗ ನಮಗೆ ಯಾರೂ ಇರುವುದಿಲ್ಲ. ಒಬ್ಬಂಟಿಯಾಗುತ್ತೇವೆ. ನ್ಯಾಯ ಮತ್ತು ಧರ್ಮ ನಮ್ಮ ಕಣ್ಣುಗಳಿದ್ದಂತೆ. ನ್ಯಾಯವನ್ನು ಆಧರಿಸಿ ನಮ್ಮ ಮನೋಧರ್ಮ ಮತ್ತು ಧರ್ಮವನ್ನು ಆಧರಿಸಿ ನ್ಯಾಯ ನಿಂತುಕೊಂಡಿರುತ್ತದೆ. ಇದನ್ನು ಮಹಿಳೆಯರು ಅರಿಯಬೇಕು’ ಎಂದು ತಿಳಿಸಿದರು.

‘ಮಹಿಳೆ ಅಪಾರ ಶಕ್ತಿ ಹೊಂದಿದ್ದಾಳೆ. ಈ ದೇಶದ ಮಣ್ಣಿನ ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಸನಾತನ ಧರ್ಮ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಕ್ಕಳನ್ನು ಸಶಕ್ತರಾಗಿ, ಶಿಕ್ಷಣವಂತರಾಗಿ ಸಜ್ಜುಗೊಳಿಸಬೇಕು. ಕುಟುಂಬ ಪ್ರಜ್ಞೆ ಮೂಡಿಸಬೇಕು. ಅವರಲ್ಲಿ ಜ್ಞಾನ, ಬಾಂಧವ್ಯವೇ ಇಲ್ಲ. ಹಣದ ಮೌಲ್ಯವೇ ಜಾಸ್ತಿಯಾಗಿದ್ದು, ಕೇವಲ ಕೆಲಸ ಹಾಗೂ ಹಣದ ಮುಂದೆ ಓಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ಸಾಹಿತಿ ಎಂ.ಎ.ನಿಲಾಂಬಿಕಾ ಮಾತನಾಡಿ, ‘ಹಣದ ಹಿಂದೆ ಬೆನ್ನು ಹತ್ತಿದ ಪ್ರಪಂಚದಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಇದ್ದಾರೆ. ಆದರೆ, ಅವರಿಗೆ ಎಲ್ಲಿಯೂ ಸುಖವಿಲ್ಲ; ಮನಸ್ಸಿಗೆ ತೃಪ್ತಿಯಿಲ್ಲ. ಇದು ವಿಪರ್ಯಾಸ’ ಎಂದರು.

ರಾಜರಾಜೇಶ್ವರಿ ಮಹಿಳಾ ಬಳಗದವರು ವಚನ ಗಾಯನ ನಡೆಸಿಕೊಟ್ಟರು.

ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಕೆ.ಸಿ.ದಿವ್ಯಶ್ರೀ, ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಅಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.