ಹುಣಸೂರು: ತಾಲ್ಲೂಕಿನ ಕುಪ್ಪೆ ಕೊಳಗಟ್ಟದ ಪ್ರಗತಿಪರ ರೈತ ಕೆ.ಎಂ.ಮೂರ್ತಿ, ‘ಡ್ರ್ಯಾಗನ್ ಫ್ರೂಟ್’ ಕೃಷಿಯ ಮೂಲಕ ಪ್ರತಿರ್ಷವೂ ಉತ್ತಮ ಫಸಲಿನ ಜತೆಗೆ ಆದಾಯದ ‘ಸಿಹಿ’ ಕಾಣುತ್ತಿದ್ದಾರೆ.
ಟ್ಯಾಕ್ಸಿ ಚಾಲಕರಾಗಿದ್ದ ಅವರು, 10 ವರ್ಷದ ಬಳಿಕ ಎರಡು ಎಕರೆ ಕೃಷಿ ಭೂಮಿಯಲ್ಲಿ 3 ವರ್ಷದಿಂದ ಬೇಸಾಯದಲ್ಲಿ ತೊಡಗಿದ್ದಾರೆ. 2 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯುತ್ತಿದ್ದಾರೆ. ಬೆಳೆದ ಹಣ್ಣು ತಾವೇ ಮಾರುತ್ತಿದ್ದಾರೆ.
ಕೊಳವೆಬಾವಿ ಕೊರೆಸಲು ಸರ್ಕಾರದಿಂದ ಆರ್ಥಿಕ ನೆರವು ಪಡೆದಿದ್ದಾರೆ. 650 ಅಡಿ ಕೊರೆದರೂ ನಿರೀಕ್ಷೆಯಷ್ಟು ನೀರು ಬಾರಲಿಲ್ಲ. ಇದರಿಂದ ಬೇಸರಗೊಳ್ಳದೇ, ಕೋಲಾರ ಜಿಲ್ಲೆಯ ರೈತರು ಕಡಿಮೆ ನೀರಿನಲ್ಲಿ ಬೇಸಾಯ ಮಾಡುವ ಬಗ್ಗೆ ಮಾಹಿತಿ ಹೊಂದಿದ್ದ ಮೂರ್ತಿ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆ ಮಾಡುವ ಆಸಕ್ತಿ ತೋರಿದರು.
ಹೊಲಕ್ಕೆ ಹೊಂದಿಕೊಂಡಂತೆ ಪ್ರಾದೇಶಿಕ ಅರಣ್ಯ ಇಲಾಖೆಗೆ ಸೇರಿದ ಅರಬ್ಬಿ ತಿಟ್ಟು ಅರಣ್ಯವಿದ್ದು, ವನ್ಯಪ್ರಾಣಿಗಳ ಉಪಟಳವಿದ್ದು ಬೇಸಾಯ ಕಷ್ಟ ಸಾಧ್ಯವೆಂದು, ಬಹು ಬೇಡಿಕೆಯ ‘ಡ್ರ್ಯಾಗನ್ ಫ್ರೂಟ್ʼ’ ಬೇಸಾಯದಿಂದ ವನ್ಯಪ್ರಾಣಿ ಹಾವಳಿ ಇಲ್ಲದೆ ಕಡಿಮೆ ನೀರು ಬಳಸಿ ಬೆಳೆಯಬಹುದು ಎಂಬ ಮಾಹಿತಿ ಸಂಗ್ರಹಿಸಿದರು.
ಬೆಂಗಳೂರಿನ ಯಲಹಂಕದ ನರ್ಸರಿಯಿಂದ ಖರೀದಿಸಿ ತಂದ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ಅರ್ಧ ಎಕರೆಯಲ್ಲಿ 2021ರಲ್ಲಿ ನಾಟಿ ಮಾಡಿದ್ದರು. ಅದು 2022ರಲ್ಲಿ ಅಲ್ಲಲ್ಲಿ ಫಸಲು ಬಿಡಲಾರಂಭಿಸಿತು. 2023-24ನೇ ಸಾಲಿನಲ್ಲಿ ₹ 1.50 ಲಕ್ಷ ಆದಾಯ ಸಿಕ್ಕಿದ್ದು, ಈ ಸಾಲಿನಲ್ಲಿ ಹಣ್ಣು ಮಾರಾಟ ಮಾಡಿ ₹ 50ಸಾವಿರ ಗಳಿಸಿದ್ದಾರೆ.
‘ಚಾಲಕ ವೃತ್ತಿಗಿಂತಲೂ ನೆಮ್ಮದಿಯ ಜೀವನ ಕೃಷಿಕನಾಗಿ ಸಾಗಿಸುತ್ತಿದ್ದೇನೆ. ಆರಂಭದಲ್ಲಿ ಕಷ್ಟ ಎನಿಸಿತ್ತು. ಕೆಲವು ರೈತರ ಪ್ರೋತ್ಸಾಹದಿಂದ ಸ್ಫೂರ್ತಿ ಪಡೆದು ಎದೆಗುಂದದೆ ಕೃಷಿಯಲ್ಲಿ ತೊಡಗಿದ್ದೇನೆ. ಬೇಸಾಯಕ್ಕೆ ಆರ್ಥಿಕ ಸಹಾಯ ಬೇಕಾಗಿತ್ತು. ಕಾರು ಮಾರಾಟ ಮಾಡಿ ಆ ಹಣದಿಂದ ಟ್ರ್ಯಾಕ್ಟರ್ ಖರೀದಿಸಿ ಯಾಂತ್ರಿಕೃತ ಬೇಸಾಯ ಮಾಡುತ್ತಿರುವೆ. ಬಿಡುವಿನ ಸಮಯದಲ್ಲಿ ಇತರೆ ಹೊಲಕ್ಕೂ ಉಳುಮೆಗೆ ಬಾಡಿಗೆಗೆ ಹೋಗುವೆ’ ಎನ್ನುತ್ತಾರೆ ಅವರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 60ಸಾವಿರ ಆರ್ಥಿಕ ಸಹಾಯ ಪಡೆದು ಡ್ರ್ಯಾಗನ್ ಫ್ರೂಟ್ ಬೆಳೆಯಲು ಅಗತ್ಯ ಬೇಕಾದ ಸಿಮೆಂಟ್ ಕಂಬಗಳನ್ನು ಸ್ವತಃ ನಿರ್ಮಿಸಿಕೊಂಡಿದ್ದೇನೆ. ಅರ್ಧ ಎಕರೆಯಲ್ಲಿ 150 ಗಿಡ ಬೆಳೆಸಿದ್ದು, ಈ ಸಾಲಿನಲ್ಲಿ 100 ಸಸಿ ಹಾಕುವ ಇಚ್ಛೆ ಇದೆ ಎಂದು ತಿಳಿಸಿದರು.
350 ರಿಂದ 500 ಗ್ರಾಂ. ತೂಕದ ಹಣ್ಣಿಗೆ ಕೆ.ಜಿಗೆ ₹ 70 ರಿಂದ ₹ 200ವರೆಗೂ ಮೈಸೂರಿನ ದಲ್ಲಾಳಿಗೆ ಮಾರುತ್ತಿದ್ದೇನೆ. ಈ ಸಾಲಿನಿಂದ ಸ್ವತಃ ಕುಟುಂಬದವರೇ ರಾಷ್ಟ್ರೀಯ ಹೆದ್ದಾರಿ 275ರ ಬದಿಯಲ್ಲಿ ಅಂಗಡಿ ಹಾಕಿ ಹಣ್ಣು ಮಾರಾಟ ಮಾಡುತ್ತಿದ್ದೇವೆ ಎಂದರು.
ಟ್ಯಾಕ್ಸಿ ಚಾಲಕ ವೃತ್ತಿಯಿಂದ ರೈತನಾಗಿ ಪರಿವರ್ತನೆ ಬೇಸಾಯದಲ್ಲಿ ತೃಪ್ತಿ ಜೀವನ ಕಟ್ಟಿಕೊಂಡ ರೈತ ನೇರವಾಗಿ ಗ್ರಾಹಕರಿಗೆ ಮಾರಾಟ
‘ಮೀನು ಸಾಕಣೆಗೆ ಸಿದ್ಧತೆ’ ‘ಸಮಗ್ರ ಕೃಷಿ ಬೇಸಾಯಕ್ಕೆ ಕೃಷಿ ಇಲಾಖೆ ಆರ್ಥಿಕ ಸಹಾಯದಿಂದ ಕೃಷಿ ಹೊಂಡ ನಿರ್ಮಿಸಿದ್ದು ಮಳೆ ನೀರು ಸಂಗ್ರಹಿಸಿ ಅದರಲ್ಲಿ 5ಸಾವಿರ ಮೀನು ಮರಿ ಸಾಕಣೆಗೆ ಸಿದ್ಧತೆ ನಡೆಸಿದ್ದೇನೆ’ ಎಂದು ಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.