ADVERTISEMENT

ಚಿಕ್ಕದೇವಮ್ಮನ 44ನೇ ವಾರ್ಷಿಕೋತ್ಸವಕ್ಕೆ ಚಾಲನೆ

ಸರಗೂರಿನಲ್ಲಿ ನಾಯಕ ಸಮಾಜದಿಂದ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 2:37 IST
Last Updated 17 ಫೆಬ್ರುವರಿ 2021, 2:37 IST
ಸರಗೂರಿನ ನಾಯಕ ಸಮಾಜ ವತಿಯಿಂದ ಮಂಗಳವಾರ ಚಿಕ್ಕದೇವಮ್ಮನ 44ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಶಾಸಕ ಸಿ. ಅನಿಲ್‌ಕುಮಾರ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು
ಸರಗೂರಿನ ನಾಯಕ ಸಮಾಜ ವತಿಯಿಂದ ಮಂಗಳವಾರ ಚಿಕ್ಕದೇವಮ್ಮನ 44ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಶಾಸಕ ಸಿ. ಅನಿಲ್‌ಕುಮಾರ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು   

ಸರಗೂರು: ಪಟ್ಟಣದಲ್ಲಿ ನಾಯಕ ಸಮಾಜ ವತಿಯಿಂದ ಮಂಗಳವಾರ ಚಿಕ್ಕದೇವಮ್ಮನವರ 44ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರತಿವರ್ಷ ಲಲಿತಾ ಪಂಚಮಿಯಿಂದ ಐದು ದಿನ ಚಿಕ್ಕದೇವಮ್ಮನವರ ಪೂಜಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪ್ರಥಮ ದಿನದ ಕಾರ್ಯಕ್ರಮಕ್ಕೆ ಶಾಸಕ ಸಿ. ಅನಿಲ್‌ಕುಮಾರ್ ಅವರು ಅಮ್ಮನವರ ದರ್ಶನ ಪಡೆದು ತೀರ್ಥಪ್ರಸಾದ ಪಡೆದರು.

ಚಿಕ್ಕದೇವಮ್ಮನವರ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ತಳಿರು- ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಪಟ್ಟಣವನ್ನು ಅಲಂಕರಿಸಲಾಗಿತ್ತು.

ADVERTISEMENT

ದೇವಾಲಯದಲ್ಲಿ ಬೆಳಿಗ್ಗೆನಿಂದಲೇ ಗಣಪತಿ ಹೋಮ, ಪುಣ್ಯಾಹ, ಕಳಶ ಪ್ರತಿಷ್ಠಾಪನೆ. ನವಗ್ರಹ ಹೋಮ, ದುರ್ಗಾಹೋಮ, ಕುಂಕುಮಾರ್ಚನೆ ನಡೆದವು. ನಂತರ ಕಪಿಲಾ ನದಿಗೆ ತೆರಳಿ ಗಂಗೆ ಪೂಜೆ ಸಲ್ಲಿಸಿ, ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪಲ್ಲಕ್ಕಿಯಲ್ಲಿ ಕೂರಿಸಿ, ಪೂರ್ಣಕುಂಭ ಕಲಶದೊಂದಿಗೆ ತರಲಾಯಿತು.

ಗಮನ ಸೆಳೆದ ವೀರಗಾಸೆ: ವಿವಿಧ ಕಲಾ ತಂಡಗಳು ತಮ್ಮ ಪ್ರದರ್ಶನ ನೀಡಿದವು. ಮಂಗಳವಾದ್ಯ, ಬ್ಯಾಂಡ್‌ಸೆಟ್ ನಾದ ಮೊಳಗಿದವು. ಸತ್ತಿಗೆಯನ್ನು ತರಲಾಯಿತು. ಹಳೇ ಹೆಗ್ಗುಡಿಲು ನೀಲಕಂಠ ತಂಡದಿಂದ ಪ್ರದರ್ಶಿಸಿದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ಉತ್ಸವ ದೇವಾಲಯ ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.

ಕಪಿಲಾ ನದಿ ದಡದಿಂದಲೂ ಸಾಗಿದ ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ಪೂರ್ಣಕುಂಭ ಹೊತ್ತು ಹರಕೆ ತೀರಿಸಿದರು. ಇನ್ನು ಕೆಲ ಬಾಲಕಿಯರು, ಮಹಿಳೆಯರು ದಾರಿಯುದ್ದಕ್ಕೂ ಉತ್ಸವ ಮೂರ್ತಿಗೆ ಆರತಿ ಎತ್ತಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಭಕ್ತಾದಿಗಳು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಸರಗೂರು ಅಕ್ಕ ಪಕ್ಕದ ಗ್ರಾಮಗಳಿಂದಲೂ ಸಾವಿರಾರು ಭಕ್ತರುವ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.