ADVERTISEMENT

ಮೈಸೂರು ದಸರಾ: ಸರಳ ರೀತಿಯಲ್ಲಿ ಗಜಪಯಣಕ್ಕೆ ಚಾಲನೆ

ಈ ಬಾರಿ ಕೋವಿಡ್ ನಿಯಮಾವಳಿಯಲ್ಲೇ ದಸರೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:05 IST
Last Updated 1 ಅಕ್ಟೋಬರ್ 2020, 16:05 IST
ನಾಗರಹೊಳೆ ವೀರನಹೊಸಹಳ್ಳಿ ಗೇಟ್ ಬಳಿ ಗುರುವಾರ ಮೈಸೂರು ದಸರೆ ಮಹೋತ್ಸವದ ಪ್ರಥಮ ಹಂತದ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ನಾಗರಹೊಳೆ ವೀರನಹೊಸಹಳ್ಳಿ ಗೇಟ್ ಬಳಿ ಗುರುವಾರ ಮೈಸೂರು ದಸರೆ ಮಹೋತ್ಸವದ ಪ್ರಥಮ ಹಂತದ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ಹುಣಸೂರು: ಮೈಸೂರು ದಸರಾ ನಾಡಹಬ್ಬಕ್ಕೆ ಸಾಂಪ್ರದಾಯಕ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರಳ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಾಗರಹೊಳೆ ವೀರನಹೊಸಹಳ್ಳಿ ಪ್ರದೇಶ ದ್ವಾರದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮದಲ್ಲಿ ಯಾವುದೇ ಆಡಂಬರವಿಲ್ಲದೆ, ಜನಪ್ರತಿನಿಧಿಗಳಿಲ್ಲದೆ ಸರಳವಾಗಿ ನಾಡಹಬ್ಬದ ಪ್ರಥಮ ಹೆಜ್ಜೆ ಗಜಪಯಣದೊಂದಿಗೆ ಅಧಿಕೃತ ಚಾಲನೆ ದೊರೆಯಿತು.

ಜಿಲ್ಲಾಧಿಕಾರಿ ರೋಹಿಣಿ ಅವರು, ಪ್ರಥಮ ಬಾರಿಗೆ ಅಂಬಾರಿ ಹೊರಲಿರುವ 54ರ ಹರೆಯದ ಅಭಿಮನ್ಯು ಆನೆಗೆ ಅರ್ಚಕ ಪ್ರಲ್ಹಾದ್‌ರಾವ್ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಇವರೊಂದಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಮತ್ತು ಅರಣ್ಯ ಇಲಾಖೆ ಎಲಿಫೆಂಟ್ ಪ್ರಾಜೆಕ್ಟ್ ಮುಖ್ಯಸ್ಥ ನಟೇಶ್ ಸೇರಿದಂತೆ ಇಲಾಖೆ ಅಧಿಕಾರಿಗಳು ಜೊತೆಗೂಡಿ ಪೂಜೆ ನೆರವೇರಿಸಿದರು.

ADVERTISEMENT

ಕೋವಿಡ್ ನಿಮಯದಂತೆ ದಸರೆ: ಗಜಪಯಣಕ್ಕೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿ ತೀರ್ಮಾನದಂತೆ ಇಂದಿನ ಗಜಪಯಣಕ್ಕೆ 100 ಜನರಿಗೆ ಅನುಮತಿ ನೀಡಲಾಗಿತ್ತು. ಮೈಸೂರಿನಲ್ಲಿ ನಡೆಯಲಿರುವ ಜಂಬೂ ಸವಾರಿಗೆ 2 ಸಾವಿರಕ್ಕೆ ಮಿತಿಗೊಳಿಸಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಹೆಚ್ಚಿನ ಜನರು ಜಂಬೂ ಸವಾರಿಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬ ಮನವಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಮುಖ್ಯಕಾರ್ಯದರ್ಶಿಗಳು ಸಮ್ಮತಿಸಿಲ್ಲ’ ಎಂದರು.

‘ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ಸಾಗಿದರೂ ಎಲ್ಲವೂ ಕೋವಿಡ್ ನಿಯಮಾನುಸಾರ ನಡೆಯಲಿದೆ. ಈಗಾಗಲೇ ದಸರಾ ಮಹೋತ್ಸವದ ವಿವಿಧ ಸಮಿತಿ ರಚಿಸಲಾಗಿದ್ದು, ಎಲ್ಲವೂ ಎಂದಿನಂತೆ ನಡೆಯಲಿದೆ’ ಎಂದು ಹೇಳಿದರು.

ಸತ್ಕಾರ: ಗಜಪಯಣಕ್ಕೆ ಗುರುವಾರ ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಮುಹೂರ್ತ ನಿಗದಿಯಾಗಿದ್ದು, ಪುರೋಹಿತರು ಸಕಾಲಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳು ಅಭಿಮನ್ಯು ಆನೆಗೆ ಹಣ್ಣು ಹಾಗೂ ಬೆಲ್ಲ ನೀಡಿ ಸತ್ಕರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ವಿಕ್ರಂ ಆನೆಗೆ ಹಣ್ಣು ನೀಡಿದರು. ಇವರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೈ ಜೋಡಿಸಿದರು.

ಕಾರ್ಯಕ್ರಮದಲ್ಲಿ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಹೇಶ್‌ಕುಮಾರ್‌, ಮಡಿಕೇರಿ ವಲಯದ ಡಿಸಿಎಫ್ ಹೀರಾಲಾಲ್, ಪ್ರಶಾಂತ್‌ಕುಮಾರ್‌, ಮೈಸೂರು ವಲಯದ ಅಲೆಕ್ಸಾಂಡರ್, ಮಂಡ್ಯ ಜಿಲ್ಲೆಯ ರವಿಶಂಕರ್ , ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.