ADVERTISEMENT

ಬಿಜೆಪಿ ಆಡಳಿತದಿಂದ ಅಘೋಷಿತ ತುರ್ತು ಪರಿಸ್ಥಿತಿ: ಎಸ್‌ಡಿಪಿಐ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 16:00 IST
Last Updated 17 ಜುಲೈ 2022, 16:00 IST
ರಾಜೀವ್‌ನಗರದ ಆಲ್‌ ಬದರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಜನಾಧಿಕಾರ ಸಮಾವೇಶ’
ರಾಜೀವ್‌ನಗರದ ಆಲ್‌ ಬದರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಜನಾಧಿಕಾರ ಸಮಾವೇಶ’   

ಮೈಸೂರು: ‘ಬಿಜೆಪಿ ಆಡಳಿತದಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾ ಸಮಿತಿಯಿಂದ ರಾಜೀವ್‌ನಗರದ ಆಲ್‌ ಬದರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಜನಾಧಿಕಾರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರವು ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಈ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಡಾಲರ್ ಮುಂದೆ ರೂಪಾಯಿಯ ಮೌಲ್ಯ ಕುಸಿದಿದೆ. ಆಡಳಿತದ ವಿರುದ್ಧ ಧ್ವನಿ ಎತ್ತುವವರ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿಕೊಂಡು ದೇಶವನ್ನು ಹಾಳು ಮಾಡುತ್ತಿದ್ದಾರೆ. ಆ ಪಕ್ಷ ನಂಬಿದರೆ ದೇಶ ಅಭಿವೃದ್ಧಿಯಾಗುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಅನ್ಯಾಯ ಆಗುತ್ತಿದ್ದರೂ:

‘ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಮೌನವಾಗಿವೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದ್ದರೂ ಸಂಸದರು ಚಕಾರ ಎತ್ತುತ್ತಿಲ್ಲ’ ಎಂದು ದೂರಿದರು.

‘ಅಲ್ಪಸಂಖ್ಯಾತರಿಗೆ ರಾಜಕೀಯ ಸ್ಥಾನಮಾನವನ್ನು ಬಿಜೆಪಿಯವರು ನೀಡುತ್ತಿಲ್ಲ. ಹಿಜಾಬ್ ಮುಂದಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಯತ್ನವೂ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಬೇಕು ಎಂದು ಕಾಂಗ್ರೆಸ್–ಜೆಡಿಎಸ್ ಪಕ್ಷಗಳು ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಪಡೆದುಕೊಂಡವು. ಆದರೆ, ಕಾಂಗ್ರೆಸ್‌, ಜೆಡಿಎಸ್‌ನ ಕೆಲವರು ಶಾಸಕರು ಬಿಜೆಪಿಗೆ ಹೋಗಿದ್ದರಿಂದ ಆ ಪಕ್ಷ ಸರ್ಕಾರ ಮಾಡಿತು. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ಕಾರಣ’ ಎಂದು ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.

ಇನ್ನಾದರೂ ಬದಲಾಗಬೇಕು:

‘ಜಾತ್ಯತೀತರು ಎಂದು ಹೇಳಿಕೊಂಡವರಿಗೆ ಇಷ್ಟು ವರ್ಷಗಳು ಮತ ಹಾಕಿದ್ದು ಸಾಕು, ಇನ್ನಾದರೂ ಬದಲಾಗಬೇಕು. ಅಲ್ಪಸಂಖ್ಯಾತರು, ದಲಿತರು ಹಾಗೂ ಬಡವರ ಬಗ್ಗೆ ಕಳಕಳಿ ಇಲ್ಲದ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದರು.

‘ನಮಗೆ ಸಂವಿಧಾನ ಮುಖ್ಯವೇ ಹೊರತು ರಾಜಕೀಯ ಮುಖಂಡರಲ್ಲ. ಸಂವಿಧಾನವು ಎಲ್ಲರಿಗೂ ಸಮಾನತೆ ಕಲ್ಪಿಸಿದೆ. ಆದರೆ, ಇಂದಿಗೂ ಅಸ್ಪೃಶ್ಯತೆ ಆಚರಣೆ ನಿಂತಿಲ್ಲ. ಅಲ್ಪಸಂಖ್ಯಾತರು ಮತ್ತು ದಲಿತರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಈ ನಡುವೆ ಸಂವಿಧಾನ ಬದಲಿಸುವ ಪ್ರಯತ್ನವೂ ನಡೆಯುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ 4.50 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ ಎಂದು ಪ್ರಧಾನಿಯೇ ಹೇಳಿದ್ದಾರೆ. ಅಂದರೆ, ಅವರೆಲ್ಲರೂ ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದು ಒಪ್ಪಿದಂತಾಯಿತು. ಇಂಥ ಆಡಳಿತಕ್ಕೆ ನಾಚಿಕೆ ಪಡಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯ ಘಟಕದ ಉಪಾಧ್ಯಕ್ಷರಾದ ದೇವನೂರ ಪುಟ್ಟನಂಜಯ್ಯ, ಪ್ರೊ.ಸೈಯೀದಾ ಸಾದಿಯಾ, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್, ಟಿ.ಆರ್. ಭಾಸ್ಕರ ಪ್ರಸಾದ್, ಅಪ್ಸರ್ ಕೊಡ್ಲಿಪೇಟೆ, ಮುಖಂಡ ಮುಖಂಡ ಬಿ.ಎಂ. ಕಾಂಬ್ಳೆ, ಜಿಲ್ಲಾ ಘಟಕದ ಅಧ್ಯಕ್ಷ ರಫತ್ ಖಾನ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.