ADVERTISEMENT

ಆತ್ಮಹತ್ಯೆ ಪ್ರಕರಣ: ತನಿಖಾ ವರದಿ ಸಲ್ಲಿಕೆ

ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌

ಡಿ.ಬಿ, ನಾಗರಾಜ
Published 11 ಸೆಪ್ಟೆಂಬರ್ 2020, 8:17 IST
Last Updated 11 ಸೆಪ್ಟೆಂಬರ್ 2020, 8:17 IST

ಮೈಸೂರು: ನಂಜನಗೂಡು ತಾಲ್ಲೂಕಿನ ಪ್ರಭಾರ ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತನಿಖಾ ವರದಿ ಸಲ್ಲಿಸಿದ್ದಾರೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

‘ಆತ್ಮಹತ್ಯೆ ಮಾಡಿಕೊಂಡ ಡಾ.ನಾಗೇಂದ್ರ ಅವರಿಗೆ ವೈಯಕ್ತಿಕ ಸಮಸ್ಯೆಗಳಿದ್ದವಾ? ಕೌಟುಂಬಿಕ ತೊಂದರೆಯಿತ್ತಾ? ಆಡಳಿತಾತ್ಮಕವಾಗಿ ಸಮಸ್ಯೆ ಎದುರಾಗಿತ್ತೇ ಎಂಬುದು ಸೇರಿದಂತೆ ವಿಭಿನ್ನ ದೃಷ್ಟಿಕೋನಗಳಿಂದ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ’ ಎಂಬುದು ‘ಪ್ರಜಾವಾಣಿ’ಗೆ
ಗೊತ್ತಾಗಿದೆ.

ADVERTISEMENT

‘ನಾಗೇಂದ್ರ ಈ ಹಿಂದೆ ಕೆಲಸ ನಿರ್ವಹಿಸಿದ್ದ ಊರುಗಳಿಗೆ ತೆರಳಿ ಮಾಹಿತಿ ಕಲೆ ಹಾಕಿರುವ ತನಿಖಾ ತಂಡ, 150ಕ್ಕೂ ಹೆಚ್ಚು ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದೆ. ವೈದ್ಯರ ಬಗ್ಗೆ ಎಲ್ಲರೂ ಸದಭಿಪ್ರಾಯ ಹೇಳಿದ್ದಾರೆ’ ಎಂಬುದು ತಿಳಿದು ಬಂದಿದೆ.

‘ಚಿಕಿತ್ಸೆ ನೀಡಲು ಯಾರೊಬ್ಬರ ಬಳಿಯೂ ಹಣ ಪಡೆಯುತ್ತಿರಲಿಲ್ಲ. ತಮ್ಮ ಬಳಿಗೆ ಚಿಕಿತ್ಸೆಗಾಗಿ ಬರುವ ಎಲ್ಲರನ್ನೂ ತಪಾಸಣೆ ಮಾಡಲು ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದರು. ಸರ್ಕಾರಿ ಆಸ್ಪತ್ರೆಗೆ ಟೋಕನ್ ವ್ಯವಸ್ಥೆ ಪರಿಚಯಿಸಿದ್ದೇ ನಾಗೇಂದ್ರ. ಯಾವುದೇ ವ್ಯಸನಿಯಾಗಿರಲಿಲ್ಲ. ಜನಾನುರಾಗಿ ಯಾಗಿದ್ದರು’ ಎಂಬುದು ತನಿಖಾ ತಂಡಕ್ಕೆ ವಿಚಾರಣೆ ಸಂದರ್ಭ ಮನದಟ್ಟಾಗಿದೆ.

ನಾಗೇಂದ್ರ ತಂದೆ–ತಾಯಿ, ಪತ್ನಿಯ ಹೇಳಿಕೆಯನ್ನು ತನಿಖಾ ತಂಡ ದಾಖಲಿ ಸಿದ್ದು, ಕೌಟುಂಬಿಕ ಸಮಸ್ಯೆ ಎಲ್ಲೂ ಗೋಚರಿಸಿಲ್ಲ. ಎಲ್ಲರೂ ಅನ್ಯೋನ್ಯ ವಾಗಿದ್ದರು ಎಂಬುದು ದೃಢಪಟ್ಟಿದೆ.

‘ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿ, ತಹಶೀಲ್ದಾರ್ ಸೇರಿದಂತೆ 15 ಅಧಿಕಾರಿ ಗಳ ಹೇಳಿಕೆಯನ್ನು ತನಿಖಾಧಿಕಾರಿ ದಾಖಲಿಸಿಕೊಂಡಿದ್ದಾರೆ. ಯಾರೊಬ್ಬರೂ ಒತ್ತಡ ಹಾಕಿರುವುದು ತನಿಖಾ ತಂಡಕ್ಕೆ ಖಚಿತಪಟ್ಟಿಲ್ಲ. ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದು, ಆಡಳಿತ ವ್ಯವಸ್ಥೆಯ ಭಾಷೆಯಲ್ಲಿ ಅಧಿಕಾರಿಗಳು ಸಂವಹನ ನಡೆಸಿರುವುದು ದಾಖಲಾಗಿದೆಯಷ್ಟೇ’ ಎಂಬುದು ಗೊತ್ತಾಗಿದೆ.

‘ವೈರಲ್ ಆಗಿದ್ದ ಆಡಿಯೊವನ್ನು ತನಿಖಾ ತಂಡ ಸೂಕ್ಷ್ಮವಾಗಿ ಅವಲೋಕಿಸಿದೆ. ಅದರಲ್ಲಿ ಯಾವೊಬ್ಬ ಅಧಿಕಾರಿ ಗುರಿಯಾಗಿಸಿ ಕೊಂಡು ಮಾನಸಿಕ ಕಿರಿಕಿರಿ ಉಂಟು ಮಾಡಿರುವುದು ದೃಢಪಟ್ಟಿಲ್ಲ. ಅವಹೇಳನಕಾರಿಯಾಗಿ ಮಾತನಾಡಿ ರುವುದು ಕಂಡು ಬಂದಿಲ್ಲ’ ಎಂಬ ಅಂಶ ವರದಿಯಲ್ಲಿ ಅಡಕಗೊಂಡಿದೆ ಎಂಬುದು ತಿಳಿದು ಬಂದಿದೆ.

ವೈದ್ಯರ ಬಿಗಿಪಟ್ಟಿಗೆ ಮಣಿದಿದ್ದ ಸರ್ಕಾರ

ನಾಗೇಂದ್ರ ಆತ್ಮಹತ್ಯೆ ಬಳಿಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು ತಮ್ಮ ಕರ್ತವ್ಯದಿಂದ ಹೊರಗುಳಿದು ಮುಷ್ಕರ ನಡೆಸಿದ್ದರು. ತನಿಖೆಗೆ ಆಗ್ರಹಿಸಿದ್ದರು. ಸಿಇಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇದು ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

ವೈದ್ಯರ ಆಕ್ರೋಶ ಶಮನಕ್ಕಾಗಿ ರಾಜ್ಯ ಸರ್ಕಾರ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ತನಿಖೆಗಾಗಿ ನಿಯೋಜಿಸಿತ್ತು. ಜೊತೆಗೆ 7 ದಿನದೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದರ ಜೊತೆಗೆ ಜಿ.ಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ವರ್ಗಾವಣೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.