ADVERTISEMENT

ಹುಣಸೂರು: ಆದಿವಾಸಿಗಳಿಂದ ಪ್ರಜ್ಞಾವಂತರಿಗೆ ಪರಿಸರ ಪಾಠ

ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಕದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:22 IST
Last Updated 9 ಅಕ್ಟೋಬರ್ 2020, 6:22 IST
ನಾಗರಹೊಳೆ ಆನೆಚೌಕೂರು ವಲಯದಲ್ಲಿ ಹಾದುಹೋಗುವ ಅಂತರರಾಜ್ಯ ರಸ್ತೆಯಲ್ಲಿ ಸಾರ್ವಜನಿಕರು ಅರಣ್ಯದಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು
ನಾಗರಹೊಳೆ ಆನೆಚೌಕೂರು ವಲಯದಲ್ಲಿ ಹಾದುಹೋಗುವ ಅಂತರರಾಜ್ಯ ರಸ್ತೆಯಲ್ಲಿ ಸಾರ್ವಜನಿಕರು ಅರಣ್ಯದಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು   

ಹುಣಸೂರು: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಆನೆಚೌಕೂರು ವಲಯದ ಆದಿವಾಸಿ ಗಿರಿಜನರಿಂದ ಪ್ರಜ್ಞಾವಂತ ನಾಗರಿಕರಿಗೆ ಅರಿವು ಮೂಡಿಸುವ ವಿನೂತನ ಜಾಗೃತಿ ಕಾರ್ಯಕ್ರಮ ನಡೆಯಿತು.

ಆನೆಚೌಕೂರು ವಲಯಕ್ಕೆ ಸೇರಿದ ಕಾರ್ಯಕಂಡಿ ಹಾಡಿ ಮತ್ತು ಮಜ್ಜಿಗೆಹಳ್ಳ ಹಾಡಿ ಆದಿವಾಸಿ ಗಿರಿಜನರು ಮತ್ತು ಆನೆ ಕ್ಯಾಂಪ್ ಸಿಬ್ಬಂದಿ ಸೇರಿದಂತೆ ಅರಣ್ಯದೊಳಗೆ ಹಾದು ಹೋಗುವ ವಾಹನದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕದಂತೆ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಕೊಡಗು ಮತ್ತು ಕೇರಳಕ್ಕೆ ತೆರಳುವ ಪ್ರಯಾಣಿಕರು ಅರಣ್ಯಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ವನ್ಯಪ್ರಾಣಿಗಳ ಜೀವಕ್ಕೆ ಕುತ್ತು ಬರಲಿದೆ. ಪ್ಲಾಸ್ಟಿಕ್ ತ್ಯಾಜ್ಯ ಗಾಜಿನ ಬಾಟಲ್ ಅರಣ್ಯದಲ್ಲಿ ಹಾಕುವುದರಿಂದ ಮೂಕಪ್ರಾಣಿಗಳಿಗೆ ಸಮಸ್ಯೆ ಎದುರಾಗಲಿದ್ದು, ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ಪೂರಕವಾಗಿ ಸ್ಪಂದಿಸುವಂತೆ ಮನವಿ ಮಾಡಿದರು.

ADVERTISEMENT

ಆನೆಚೌಕೂರು ವಲಯದ ಅಧಿಕಾರಿ ಕಿರಣ್‌ಕುಮಾರ್ ಮಾತನಾಡಿ, ‘ರಾಜ್ಯ ಹೆದ್ದಾರಿಯಲ್ಲಿರುವ ನಾಗರಹೊಳೆ ಅರಣ್ಯದ ಆನೆಚೌಕೂರು ವಲಯದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರು ತ್ಯಾಜ್ಯ ತಂದು ಅರಣ್ಯದಲ್ಲಿ ವಿಲೇವಾರಿ ಮಾಡುವ ಹೀನ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಇಲಾಖೆ ವಿವಿಧ ರೀತಿ ಜಾಗೃತಿ ಮೂಡಿಸುತ್ತಿದೆ. ಇದಲ್ಲದೆ ತ್ಯಾಜ್ಯ ಸಂಗ್ರಹವನ್ನು ಪ್ರತಿ 15 ದಿನಕ್ಕೊಮ್ಮೆ ರಾಜ್ಯ ಹೆದ್ದಾರಿ ಅಂಚಿನಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಕೊಡಗಿನಲ್ಲಿ ಕಸ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಆಗಿದ್ದು, ನಿಗದಿತ ಸ್ಥಳವಿಲ್ಲದೆ ನಾಗರಿಕರು ಕಾಡಂಚಿನಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಇದಲ್ಲದೆ ವಾಹನದಲ್ಲಿ ಓಡಾಡುವ ನೆಪದಲ್ಲೂ ಅರಣ್ಯದಲ್ಲಿ ವಿಲೇವಾರಿ ನಡೆದಿದೆ. ಈ ಸಂಬಂಧ ಕೊಡಗು ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಂಡಲ್ಲಿ ಅರಣ್ಯದ ಮೇಲಿನ ತ್ಯಾಜ್ಯದ ಒತ್ತಡ ಸುಧಾರಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.