ADVERTISEMENT

ರೈತನ ಮರಕ್ಕೆ ರೈತನೇ ಮಾಲೀಕ ಕಾಯ್ದೆ ಜಾರಿಗೆ ಒತ್ತಾಯ

‘ಕಾವೇರಿ ಕೂಗು’ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ; ಹುಣಸೂರು ನಗರದಲ್ಲಿ ಬೈಕ್‌ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:21 IST
Last Updated 5 ಸೆಪ್ಟೆಂಬರ್ 2019, 12:21 IST
ಹುಣಸೂರು ನಗರದಲ್ಲಿ ‘ಕಾವೇರಿ ಕೂಗು’ ಅಭಿಯಾನದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸಾರ್ವಜನಿಕರನ್ನುದ್ದೇಶಿಸಿ ಬುಧವಾರ ಮಾತನಾಡಿದರು (ಎಡಚಿತ್ರ). ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಮೋಟಾರ್ ಬೈಕ್ ರ‍್ಯಾಲಿ ಹುಣಸೂರಿನ ಪ್ರಮುಖ ರಸ್ತೆಗಳಲ್ಲಿ ತೆರಳಿತು
ಹುಣಸೂರು ನಗರದಲ್ಲಿ ‘ಕಾವೇರಿ ಕೂಗು’ ಅಭಿಯಾನದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸಾರ್ವಜನಿಕರನ್ನುದ್ದೇಶಿಸಿ ಬುಧವಾರ ಮಾತನಾಡಿದರು (ಎಡಚಿತ್ರ). ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಮೋಟಾರ್ ಬೈಕ್ ರ‍್ಯಾಲಿ ಹುಣಸೂರಿನ ಪ್ರಮುಖ ರಸ್ತೆಗಳಲ್ಲಿ ತೆರಳಿತು   

ಹುಣಸೂರು: ಅರಣ್ಯ ಕಾಯ್ದೆ ಅನು ಸಾರ ರೈತರು ಬೆಳೆಯುವ ಮರಗಳಿಗೆ ಅವರನ್ನೇ ಮಾಲೀಕರನ್ನಾಗಿ ಘೋಷಿಸ ಬೇಕು ಎಂದು ತಮಿಳುನಾಡಿನ ಈಶ ಫೌಂಡೇಷನ್ನಿನ ಜಗ್ಗಿ ವಾಸುದೇವ್‌ ಆಗ್ರಹಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ‘ಕಾವೇರಿ ಕೂಗು ಅಭಿಯಾನ’ದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಆರಂಭದಲ್ಲಿ ಜಾರಿಗೊಳಿಸಿದ ಅರಣ್ಯ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ತರಬೇಕು. ರೈತರು ಬೆಳೆಯುವ ಮರಗಳಿಗೆ ಅವರೇ ಮಾಲೀಕರಾಗಬೇಕು. ಈ ನಿಯಮ ರೂಪಿಸುವಂತೆ ಈಗಾಗಲೇ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಎರಡೂ ಸರ್ಕಾರಗಳು ಸಕರಾತ್ಮಕವಾಗಿ ಸ್ಪಂದಿಸಿವೆ ಎಂದರು.

ADVERTISEMENT

ಕಾನೂನಿನ ತೊಡಕಿನಿಂದಾಗಿಯೇ ರೈತರು ತಮ್ಮ ಭೂಮಿಯಲ್ಲಿ ಮರಗಳನ್ನು ಬೆಳೆಸಲು ಮುಂದಾಗುತ್ತಿಲ್ಲ. ಹೀಗಾಗಿ, ಕಾನೂನಿನ ಬಿಗಿ ಕುಣಿಕೆ ಸಡಿಲಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಮರಗಳ ಕೊರತೆಯಿಂದ ಕಾವೇರಿ ತನ್ನ ಪಾತ್ರದಲ್ಲಿ ಬತ್ತುತ್ತಿದೆ. ವಾರ್ಷಿಕ 4ರಿಂದ 8 ಕಿ.ಮಿ. ನದಿ ಹರಿವು ಕ್ಷೀಣಿಸಿದೆ. ಸಮುದ್ರಕ್ಕೆ ಸೇರಬೇಕಾದ ನೀರು ಸೇರುತ್ತಿಲ್ಲ. ಇದರಿಂದ ಅನೇಕ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾವೇರಿ ನದಿ ಒಡಲು ಬರಿದಾಗುತ್ತಿದೆ. ಇದರ ರಕ್ಷಣೆ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ ಎಂದು ಅವರು ಹೇಳಿದರು.

ಮುಂಗಾರಿನಲ್ಲಿ ನೀರು ಹಿಡಿದಿಡುವ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕು. ಹರಿಯುವ ನದಿ ಪಾತ್ರದಲ್ಲಿ ಭೂಮಿಗೆ ನೀರು ಸೇರಿಸುವ ಪ್ರಕ್ರಿಯೆ ಆಗದಿರುವುದರಿಂದ ಮಣ್ಣಿನ ಸವೆತ ಹೆಚ್ಚಾಗಿದೆ. ಕೆಂಪು ನೀರು ಕಾವೇರಿ ಕಣಿವೆಯಲ್ಲಿ ಹರಿದು, ಕೆ.ಆರ್.ಎಸ್‌ ಮೂಲಕ ತಮಿಳುನಾಡಿನಲ್ಲಿ ಹರಿದಿದೆ ಎಂದರು.

ಸಮುದ್ರಕ್ಕೆ ನೀರು ಸೇರಿಸುವ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ದೇಶದ 7,400 ಕಿ.ಮೀ. ಕಡಲು ತೀರದಲ್ಲಿ 140 ಕಿ.ಮಿ. ವ್ಯಾಪ್ತಿ ಭೂಮಿಯಲ್ಲಿ ಉಪ್ಪಿನಾಂಶ ಹೆಚ್ಚಾಗಿ, ಕೃಷಿ ಯೋಗ್ಯವಲ್ಲದ ಭೂಮಿಯಾಗಿದೆ. ತಮಿಳುನಾಡಿನಲ್ಲಿ 60 ಕಿ.ಮಿ ಪ್ರದೇಶ ಕೃಷಿ ಯೋಗ್ಯವಲ್ಲದಾಗಿದೆ ಎಂದರು.

ಅಡಗೂರು ಎಚ್ ವಿಶ್ವನಾಥ್ ಮಾತನಾಡಿ, ‘ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಅನ್ನದಾತನನ್ನು ಮರೆತಾಗ ಅದನ್ನು ನೆನಪಿಸುವ ಕೆಲಸ ಧಾರ್ಮಿಕ ಗುರುಗಳು ಹಾಗೂ ಸಾರ್ವಜನಿಕರು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

ಕಾವೇರಿ ನದಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ರಾಜಕಾರಣಿ ಮೈಮರೆತಿದ್ದು, ಈ ಸಂಬಂಧ ಸದ್ಗುರು ಹಮ್ಮಿಕೊಂಡ ಅಭಿಯಾನದಲ್ಲಿ ತೊಡಗಿಸಿ ನಾಗರಿಕರಲ್ಲಿ ಕ್ಷಮಾಪಣೆ ಕೋರಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರಾದ ರಾಗಿಣಿ, ರಕ್ಷಿತ್ ಶೆಟ್ಟಿ, ದಿಗಂತ್, ನಟರಾಜ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.