ತಿ.ನರಸೀಪುರ: ಕಬ್ಬಿನ ಎಫ್‌ಆರ್‌ಪಿ ದರ, ಉಪ ಉತ್ಪನ್ನಗಳ ಲಾಭ ಹಂಚಿಕೆ ಸೇರಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಬ್ಬು ಬೆಳೆಗಾರರ ಸಂಘದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಕೆಡಿಪಿ ಸಭೆಗೆ ಆಗಮಿಸಿದ್ದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಸಂಘದ ಮುಖಂಡರು ಹಕ್ಕೋತ್ತಾಯದ ಮನವಿ ಪತ್ರವನ್ನು ಮಂಗಳವಾರ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಕಬ್ಬಿನ ಎಫ್‌ಆರ್‌ಪಿ ದರ ಪುನರ್ ಪರಿಶೀಲನೆ ಹಾಗೂ ರೈತನ ಹೊಲದಲ್ಲಿ ದರ ನಿಗದಿ, ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ, ಕಳೆದ ವರ್ಷದ ಸರ್ಕಾರ ನಿಗದಿಪಡಿಸಿರುವ ಹೆಚ್ಚುವರಿ ಬೆಲೆ 150 ರೂಪಾಯಿಗಳಂತೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ₹950 ಕೋಟಿ ಬಾಕಿ ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ರೈತರ ಸಾಲಗಳಿಗೆ ಬಡ್ಡಿ ಕಟ್ಟಿಸಿಕೊಂಡು ಮರು ಸಾಲ ನವೀಕರಣ ಮಾಡಿ ಕೊಡುವುದು, ಸಕಾಲದಲ್ಲಿ ರೈತರಿಗೆ ಕೃಷಿ ಸಾಲ ಮತ್ತು ಇನ್ನಿತರ ಸಾಲ ಸೌಲಭ್ಯ ದೊರಕಿಸಲು ಬ್ಯಾಂಕುಗಳಿಗೆ ಆದೇಶ ನೀಡುವುದು, ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಡೋನೇಶನ್ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು, ಪಟ್ಟಣದ ವ್ಯಾಪ್ತಿಗಳಲ್ಲಿನ ಗುಂಡಿ ಬಿದ್ದ ರಸ್ತೆಗಳ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಹಾಗೆಯೇ, ಮುಂಗಾರಿನಲ್ಲಿ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳು ಸಬ್ಸಿಡಿ ದರದಲ್ಲಿ ವಿತರಣೆ ಆಗಬೇಕು. ತುಂಬಲದ ನ್ಯಾಚುರಲ್ ಆ್ಯಂಡ್ ಎಷೆನ್ಸಿಯಲ್ ಆಯಿಲ್ ಪ್ರೈವೇಟ್ ಲಿಮಿಟೆಡ್‌ನಿಂದ ರೈತರು ಬೆಳೆದ ಸುಗಂಧರಾಜ ಹೂವು ಖರೀದಿ ಮಾಡಲು ಹಾಗೂ ಹೆಚ್ಚಿನ ದರ ನಿಗದಿಯಾಗಬೇಕು. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಜಾರಿ ಸೇರಿಯೂ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿ, ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಸಂಘದ ಮುಖಂಡರಾದ ಕಿರಗಸೂರು ಪ್ರಸಾದ್ ನಾಯಕ್, ಅಪ್ಪಣ್ಣ, ಕರುಹಟ್ಟಿ ಉಮೇಶ್, ಬಿ.ಪಿ.ಪರಶಿವಮೂರ್ತಿ, ನಂಜುಂಡಸ್ವಾಮಿ, ರಾಜೇಶ್, ಬಸವರಾಜು, ರಾಮಮೂರ್ತಿ, ಗೌರಿಶಂಕರ್, ರಾಜಬುದ್ಧಿ, ರಾಜೇಂದ್ರ ಸೇರಿ ಹಲವು ರೈತ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.