ADVERTISEMENT

ರೈತರ ಆತ್ಮಹತ್ಯೆ ದೇಶಕ್ಕೆ ಅವಮಾನ: ಸಚಿವೆ

ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:22 IST
Last Updated 18 ಆಗಸ್ಟ್ 2021, 5:22 IST
ಮೈಸೂರಿನ ರಿಯೊ ಮೆರಿಡಿಯನ್ ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಮಂಗಳಾ ಸೋಮಶೇಖರ್, ಸಿದ್ಧರಾಜು, ರಾಜೇಂದ್ರ, ಎಲ್.ನಾಗೇಂದ್ರ, ಶ್ರೀವತ್ಸ, ಶೋಭಾ ಕರಂದ್ಲಾಜೆ, ಎಸ್.ಟಿ.ಸೋಮಶೇಖರ್, ಪ್ರತಾಪಸಿಂಹ, ಅಡಗೂರು ಎಚ್ ವಿಶ್ವನಾಥ್ ಕಾರ್ಯಕರ್ತರತ್ತ ಕೈ ಬೀಸಿದರು (ಎಡಚಿತ್ರ). ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು
ಮೈಸೂರಿನ ರಿಯೊ ಮೆರಿಡಿಯನ್ ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಮಂಗಳಾ ಸೋಮಶೇಖರ್, ಸಿದ್ಧರಾಜು, ರಾಜೇಂದ್ರ, ಎಲ್.ನಾಗೇಂದ್ರ, ಶ್ರೀವತ್ಸ, ಶೋಭಾ ಕರಂದ್ಲಾಜೆ, ಎಸ್.ಟಿ.ಸೋಮಶೇಖರ್, ಪ್ರತಾಪಸಿಂಹ, ಅಡಗೂರು ಎಚ್ ವಿಶ್ವನಾಥ್ ಕಾರ್ಯಕರ್ತರತ್ತ ಕೈ ಬೀಸಿದರು (ಎಡಚಿತ್ರ). ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು   

ಮೈಸೂರು: ‘ರೈತರ ಆತ್ಮಹತ್ಯೆ ದೇಶಕ್ಕೆ ಅವಮಾನ. ರೈತರು ಕೃಷಿ ಭೂಮಿಯಲ್ಲೇ ಉಳಿಯುತ್ತೇವೆ ಎನ್ನುವ ವಿಶ್ವಾಸ ತುಂಬುವ ಕೆಲಸ ಮಾಡಲಾಗುವುದು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
ತಿಳಿಸಿದರು.

ಇಲ್ಲಿನ ರಿಯೊ ಮೆರಿಡಿಯನ್ ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

‘ಕೃಷಿಯ ಜತೆಗೆ ಹೈನುಗಾರಿಕೆ, ಜೇನುಸಾಕಾಣಿಕೆ, ಕುಕ್ಕುಟ್ಟೋದ್ಯಮ ಸೇರಿದಂತೆ ಉಪಕಸುಬುಗಳಲ್ಲಿ ತೊಡಗಿರುವ ರೈತರ ಆತ್ಮಹತ್ಯೆ ತೀರಾ ಕಡಿಮೆ ಇದೆ ಎಂದು ಅಧ್ಯಯನಗಳು ತಿಳಿಸಿವೆ. ರೈತರು ಕೇವಲ ಕೃಷಿ ಮೇಲೆ ಮಾತ್ರ ಅವಲಂಬಿತರಾಗದೇ ಇಂತಹ ಉಪಕಸುಬುಗಳು ಹಾಗೂ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಕರೆ
ನೀಡಿದರು.

ADVERTISEMENT

‘ಡಾ.ಖಾದರ್ ಸಿರಿಧಾನ್ಯಗಳ ಮಹತ್ವ ಸಾರಿದರು. ಈಗ ವಿಶ್ವಸಂಸ್ಥೆಯೂ ಮಾನ್ಯತೆ ನೀಡಿದೆ. ಕೇಂದ್ರ ಸರ್ಕಾರ ಜಾರಿಗಳಿಸಿರುವ ಕಾಯ್ದೆಗಳು ರೈತಪರವಾಗಿದೆ. ನಿಜವಾದ ರೈತರಿಂದ ವಿರೋಧ ವ್ಯಕ್ತವಾಗಿಲ್ಲ’
ಎಂದರು.

‘ನರೇಂದ್ರ ಮೋದಿ ಈಗ ವಿಶ್ವಸಂಸ್ಥೆಗೆ ಹೋದರೆ ಎಲ್ಲ ದೇಶಗಳೂ ಗೌರವ ಕೊಡುತ್ತಿವೆ. ಹಿಂದಿನ ಪ್ರಧಾನಿಗೆ ಗೌರವ ಸಿಗುತ್ತಿರಲಿಲ್ಲ. ಮೋದಿ ಅಧಿಕಾರದಿಂದ ನಿರ್ಗಮಿಸುವಾಗ ಕೇವಲ ತಮ್ಮ ಬಟ್ಟೆಗಳಿರುವ ಸೂಟ್‌ಕೇಸ್‌ನೊಂದಿಗೆ ಮಾತ್ರ ನಿರ್ಗಮಿಸುತ್ತಾರೆ. ಭ್ರಷ್ಟಾಚಾರ ನಡೆಸಿದವರಿಗೆ ಇವರನ್ನು ಟೀಕಿಸುವ ಹಕ್ಕಿಲ್ಲ’ ಎಂದು
ಅವರು ಹೇಳಿದರು.

‘ಬಿಜೆಪಿ ಕಚೇರಿಯಲ್ಲಿ 45 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದ ರಾಜಾಚಾರ್ಯ ಅವರು ಯಾವ ಅಧಿಕಾರವನ್ನೂ ಅನುಭವಿಸಲಿಲ್ಲ. ಪಕ್ಷಕ್ಕಾಗಿ ದುಡಿಯುತ್ತಲೇ ಕಚೇರಿಯಲ್ಲೇ ನಿಧನರಾದರು. ಇದು ಬಿಜೆಪಿ ಕಾರ್ಯಕರ್ತರ ವರ್ತನೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ತನ್ನ ಸಂಪುಟದ ಸದಸ್ಯರನ್ನು ಲೋಕಸಭೆಗೆ ಪರಿಚಯಿಸಿಕೊಡಲು ವಿಪಕ್ಷಗಳು ಪ್ರಧಾನಿಯವರಿಗೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ, ಜನರ ಮುಂದೆ ಹೊಸ ಮಂತ್ರಿಗಳನ್ನು ಪರಿಚಯಿಸಿಕೊಡಲು ಈ ಯಾತ್ರೆ ಆಯೋಜಿಸಿದ್ದೇವೆ’ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ, ಬಿಜೆಪಿ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಮುಖಂಡರಾದ ಸಿದ್ದರಾಜು, ಮೈ.ವಿ.ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.