ಮೈಸೂರು: ‘ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ನಮ್ಮ ಸ್ಥಾನವನ್ನು ನಾವೇ ಕಂಡುಕೊಳ್ಳಬೇಕು. ಬೇರೆಯರ ಅಗತ್ಯವನ್ನು ಗುರುತಿಸಿ ಸೃಷ್ಟಿಸುವ ಕಲೆಗೆ ಮೌಲ್ಯವಿದೆ’ ಎಂದು ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಹೇಳಿದರು.
ಇಲ್ಲಿನ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಆವರಣದಲ್ಲಿ ಶನಿವಾರ ಕುಂಚ ಕಾವ್ಯ ಸಾಂಸ್ಕೃತಿಕ ಸಮಿತಿಯ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರಸ್ತುತ ಎಲ್ಲಾ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆ ಪ್ರವೇಶಿಸಿರುವ ಕಾರಣ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಬೇಕು. ಎಐ ತಂತ್ರಜ್ಞಾನ ಎಲ್ಲಾ ಮಾಹಿತಿಯನ್ನು ಕ್ರೋಢಿಕರಿಸಿ ಫಲಿತಾಂಶವನ್ನು ನೀಡುತ್ತದೆ. ಇದು ದೊಡ್ಡ ಪ್ರಮಾಣದ ಕೆಲಸವಾದರೂ ಗುಣಾತ್ಮಕ ಕೆಲಸವಲ್ಲ, ಇಲ್ಲಿ ಮೌಲ್ಯಮಾಪನ ಇರುವುದಿಲ್ಲ. ಈ ಮಿತಿಯೇ ನಮ್ಮ ಅಧ್ಯಯನ ವಸ್ತುವಾಗಬೇಕು’ ಎಂದು ಸಲಹೆ ನೀಡಿದರು.
‘ಪ್ರತಿ ಕ್ಷೇತ್ರದಲ್ಲಿಯೂ ನಾವು ಎಐಗಿರುವ ಮಿತಿಯನ್ನು ಗುರುತಿಸಿಕೊಂಡು ಅದಕ್ಕೂ ಮೀರಿದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಕಾಲ ಕಳೆದಂತೆ ತಂತ್ರಜ್ಞಾನ ಬೆಳವಣಿಗೆ ಮನುಷ್ಯನಿಗಿರುವ ಅವಕಾಶಗಳನ್ನು ಕಿತ್ತುಕೊಳ್ಳುತ್ತವೆ. ಆದರೆ ಸಂಪೂರ್ಣವಾಗಿ ಮನುಷ್ಯನ ಕೆಲಸ ಮಾಡಲು ಯಾವ ತಂತ್ರಜ್ಞಾನಕ್ಕೂ ಸಾಧ್ಯವಿಲ್ಲ. ತಂತ್ರಜ್ಞಾನದ ಈ ಹಿನ್ನಡೆಯೇ ನಮ್ಮ ಬಂಡವಾಳ’ ಎಂದರು.
‘ಎಐನಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ದೊಡ್ಡಮಟ್ಟದ ಶಸ್ತ್ರಚಿಕಿತ್ಸೆಗಳನ್ನು ಕರಾರುವಕ್ಕಾಗಿ ಮಾಡುವಂತಹ ರೋಬೊಟ್‌ಗಳು ಬಂದಿವೆ. ಕ್ಷಣ ಮಾತ್ರದಲ್ಲಿ ನಮ್ಮ ಆಲೋಚನೆಯಂತೆ ನೂರಾರು ಚಿತ್ರಗಳನ್ನು ಸೃಷ್ಟಿಸುವ ಆ್ಯಪ್‌ಗಳಿವೆ. ಇದರಿಂದಾಗಿ, ನಾವು ಓದುತ್ತಿರುವ ಕೋರ್ಸ್‌ನಿಂದ ಏನು ಪ್ರಯೋಜನ ಎಂದು ವಿದ್ಯಾರ್ಥಿಗಳು ಕೇಳಿದರೆ ತಪ್ಪಾಗುತ್ತದೆ. ಕೋರ್ಸ್ ಅನ್ನು ಬಳಸಿಕೊಂಡು ಯಾವ ರೀತಿ ಬೆಳೆಯಬಲ್ಲೆ ಎಂಬ ಆಲೋಚನೆ ಬೇಕು’ ಎಂದು ಕಿವಿಮಾತು ಹೇಳಿದರು.
ಕಲಾವಿದ ಎಂ.ಎಸ್.ಉಮೇಶ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಗ್ರಾಫಿಕ್ ವಿಭಾಗದ ಮುಖ್ಯಸ್ಥ ಎ.ಪಿ.ಚಂದ್ರಶೇಖರ್, ಸಮಿತಿ ಕಾರ್ಯದರ್ಶಿ ಹೇಮಂತ್, ಸಮಿತಿ ಉಪಕಾರ್ಯರ್ಶಿ ಎಸ್.ಆರ್.ನೀಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.