ADVERTISEMENT

ಆಕಸ್ಮಿಕ ಬೆಂಕಿ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 13:09 IST
Last Updated 15 ಫೆಬ್ರುವರಿ 2020, 13:09 IST

ಕೆ.ಆರ್.ನಗರ: ನೀರು ಕಾಯಿಸುವ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಗುರುವಾರ ನಸುಕಿನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಮುಖ್ಯ ಕಾನ್‌ಸ್ಟೆಬಲ್ ರೇಣುಕಾಸ್ವಾಮಿ (45) ಗುರುವಾರ ರಾತ್ರಿ ಮೃತಪಟ್ಟರು. ಗುರವಾರವೇ ಇವರ ಪುತ್ರ ತೇಜಸ್ (14) ಮೃತ‍ಪಟ್ಟಿದ್ದರು.

ಇಬ್ಬರ ಮೃತದೇಹಗಳನ್ನು ಕೆ.ಆರ್.ನಗರದ ಈಶ್ವರನಗರದಲ್ಲಿನ ಮನೆಯ ಮುಂಭಾಗ ಕೆಲಹೊತ್ತು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ, ತಾಲ್ಲೂಕಿನ ಗಂಧನಹಳ್ಳಿ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಅವರ ಪತ್ನಿ ಪುಷ್ಪಲತಾ ಅವರಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಎಎಸ್ಐ ಮೇಲೆ ಹಲ್ಲೆ ; ಬಂಧನ

ADVERTISEMENT

ಮದ್ಯ ಸೇವಿಸಿದ ಅಮಲಿನಲ್ಲಿ ಎಎಸ್ಐ ಮೇಲೆಯೇ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ನಗರದ ಮಹದೇವ್ ಎಂಬಾತನೇ ಕುಡಿದು ಹಲ್ಲೆ ಮಾಡಿ ಬಂಧನಕ್ಕೊಳಗಾದವ.

ಈತ ನಗರದಲ್ಲಿನ ಮಲ್ಲಿಕಾರ್ಜುನ ಬಾರ್‌ನಲ್ಲಿ ಮದ್ಯ ಸೇವಿಸಿ ಕ್ಯಾಷಿಯರ್ ಜತೆ ಗಲಾಟೆ ಮಾಡಿಕೊಂಡು ಹಲ್ಲೆ ಮಾಡಿದ್ದ. ಬಾರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎ.ಎಸ್.ಐ. ತಮ್ಮೇಗೌಡ ಬಾರ್ ಬಳಿ ತೆರಳಿ ಆರೋಪಿ ಮಹದೇವ್‍ನನ್ನು ಗಲಾಟೆ ಮಾಡದೆ, ಸಮಸ್ಯೆ ಇದ್ದಲ್ಲಿ ಠಾಣೆಗೆ ಬರಲು ಹೇಳಿದ್ದಾರೆ.

ಡಎಎಸ್‌ಐ ಮಾತಿನಿಂದ ಆಕ್ರೋಶಗೊಂಡ ಮಹದೇವ್, ತಮ್ಮೇಗೌಡರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.