ADVERTISEMENT

ಬಾಲಕಿ ರಕ್ಷಿಸಲು ವಿಮಾನ ಬಳಕೆ

ಅಪ್ಪ ಹೊಡೆಯುತ್ತಾನೆಂದು ಹೆದರಿ ಮನೆ ಬಿಟ್ಟ 7ನೇ ತರಗತಿ ವಿದ್ಯಾರ್ಥಿನಿ

ಕೆ.ಎಸ್.ಗಿರೀಶ್
Published 18 ಜನವರಿ 2019, 20:22 IST
Last Updated 18 ಜನವರಿ 2019, 20:22 IST

ಮೈಸೂರು: ‘ಬೇಡ ಎಂದರೂ ಹೋಗಿದ್ದೀಯಾ. ಮನೆಗೆ ಬಾ ಕಾಲು ಮುರಿಯುತ್ತೇನೆ’ ಎಂದು ಅಪ್ಪ ಮೊಬೈಲ್‌ನಲ್ಲಿ ಹೇಳಿದ ಮಾತಿಗೆ ಹೆದರಿ ಮುಂಬೈಗೆ ತೆರಳಿದ್ದ 7ನೇ ತರಗತಿ ಬಾಲಕಿಯೊಬ್ಬಳನ್ನು ನಗರ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬೆಳಿಗ್ಗೆ ವಿಮಾನದ ಮೂಲಕ ತೆರಳಿ ರಾತ್ರಿ ವಿಮಾನದ ಮೂಲಕವೇ ಕರೆತಂದಿದ್ದು ಮಾತ್ರವಲ್ಲ ಅದರ ಸಂಪೂರ್ಣ ವೆಚ್ಚವನ್ನು ವಹಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ.

ಏನಿದು ಘಟನೆ?

ಜಿಲ್ಲೆಯ 12 ವರ್ಷದ ಬಾಲಕಿಯೊಬ್ಬಳು ಪೋಷಕರು ಬೇಡ ಎಂದರೂ ಪ್ರವಾಸಕ್ಕೆ ಹೋಗಿದ್ದಳು. ಈ ವೇಳೆ ಮನೆಗೆ ಬಂದರೆ ಕಾಲು ಮುರಿಯುತ್ತೇನೆ ಎಂದು ಅಪ್ಪ ಹೇಳಿದ ಮಾತಿಗೆ ಹೆದರಿದ ಬಾಲಕಿ ಡಿ. 27ರಂದು ನೇರ ಮುಂಬೈ ರೈಲು ಹತ್ತಿದಳು. ಮುಂಬೈ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಗೆ ಕೆಲಸ ಕೊಡಿಸುತ್ತೇನೆ ಎಂದು ಪುಸಲಾಯಿಸುತ್ತಿದ್ದ ವೇಳೆ ಸರ್ಕಾರೇತರ ಸಂಸ್ಥೆಯೊಂದರ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ಬಾಲಕಿ ಬಳಿ ತೆರಳುತ್ತಿದ್ದಂತೆ ವ್ಯಕ್ತಿಯು ಪಲಾಯನ ಮಾಡಿದ್ದಾನೆ. ಬಾಲಕಿಯ ವೃತ್ತಾಂತ ಕೇಳಿದ ಅವರು ಆಶ್ರಮವೊಂದಕ್ಕೆ ಸೇರಿಸಿದ್ದಾರೆ.

ADVERTISEMENT

ಇತ್ತ ಪೋಷಕರು ಜ. 3ರವರೆಗೂ ಸಾಕಷ್ಟು ಕಡೆ ಹುಡುಕಾಟ ನಡೆಸಿ ಕೊನೆಗೆ ಪೊಲೀಸ್ ಠಾಣೆಯೊಂದಕ್ಕೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಬಾಲಕಿಯ ಮೊಬೈಲ್ ಕರೆಗಳ ಜಾಡು ಹಿಡಿದು ಆಕೆ ಮುಂಬೈನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ಬಾಲಕಿ ಆಶ್ರಮದಲ್ಲಿ ಸುರಕ್ಷಿತವಾಗಿರುವುದು ಗೊತ್ತಾಗಿದೆ. ಆದರೆ, ಬಾಲಕಿಯ ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಬಳಿ ಮುಂಬೈಗೆ ತೆರಳುವಷ್ಟು ಹಣ ಇಲ್ಲ ಎಂದು ಅಂಗಲಾಚಿದ್ದಾರೆ. ಇವರ ಮನವಿಗೆ ಓಗೊಟ್ಟ ಪೊಲೀಸರು ಒಂದೇ ದಿನದಲ್ಲಿ ವಿಮಾನದ ಮೂಲಕ ಮುಂಬೈನಿಂದ ಯುವತಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಇಡೀ ಕಾರ್ಯಾಚರಣೆಯು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಹಾಗೂ ಡಿಸಿಪಿ ಡಾ.ವಿಕ್ರಂ ಆಮಟೆ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ದೇವರಾಜ ವಿಭಾಗದ ಎಸಿಬಿ ಗಜೇಂದ್ರಪ್ರಸಾದ್ ಅವರು ಇನ್‌ಸ್ಪೆಕ್ಟರ್‌ ಸಂತೋಷ್‌ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿದರು. ಇವರೊಂದಿಗೆ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ತಂಡವು ಬಾಲಕಿಯನ್ನು ರಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.