ADVERTISEMENT

ಹೊರವಲಯದ ಕಸದ ಸಮಸ್ಯೆಗೆ ಶೀಘ್ರವೇ ಮುಕ್ತಿ

ಮೈಸೂರು ತಾಲ್ಲೂಕಿನ 15 ಕಡೆ ತ್ಯಾಜ್ಯ ವಿಲೇವಾರಿ ಘಟಕಗಳು

ಕೆ.ಎಸ್.ಗಿರೀಶ್
Published 8 ಮೇ 2019, 19:19 IST
Last Updated 8 ಮೇ 2019, 19:19 IST
ಕುಂಬಾರಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಕೇಂದ್ರ
ಕುಂಬಾರಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಕೇಂದ್ರ   

ಮೈಸೂರು: ತಾಲ್ಲೂಕಿನ 15 ಕಡೆ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆಯಲು ಮೈಸೂರು ತಾಲ್ಲೂಕು ಪಂಚಾಯಿತಿ ನಿರ್ಧರಿಸಿದ್ದು, 7 ಕಡೆ ತುರ್ತಾಗಿ ತೆರೆಯಲು ಸಿದ್ಧತೆ ಆರಂಭಿಸಿದೆ.

ಕಸದ ಸಮಸ್ಯೆಯಿಂದ ಬಾಧಿತರಾಗಿದ್ದ ನಗರದ ಹೊರವಲಯದ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರು ಇದರಿಂದ ನಿಟ್ಟುಸಿರು ಬಿಡುವಂತಾಗಿದೆ.‌

ಮುಖ್ಯವಾಗಿ ರಿಂಗ್‌ರಸ್ತೆಯ ಆಸುಪಾಸಿನ ಗ್ರಾಮಗಳಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದೆ. ಹಿನಕಲ್, ಬೋಗಾದಿ, ಆಲನಹಳ್ಳಿ, ಕೂರ್ಗಳ್ಳಿ ಸೇರಿದಂತೆ ಹಲವೆಡೆ ತ್ಯಾಜ್ಯದ ರಾಶಿಯೇ ಬಿದ್ದಿದೆ. ತಡವಾಗಿಯಾದರೂ ತಾಲ್ಲೂಕು ಪಂಚಾಯಿತಿ ಎಚ್ಚೆತ್ತು ತ್ಯಾಜ್ಯ ವಿಲೇವರಿ ಘಟಕಗಳ ಸ್ಥಾಪನೆಗೆ ಮುಂದಾಗಿದೆ.

ADVERTISEMENT

ಈ ಘಟಕಗಳು ಸದ್ಯ ಕುಂಬಾರಕೊಪ್ಪಲಿನಲ್ಲಿರುವ ಶೂನ್ಯ ಕಸ ನಿರ್ವಹಣಾ ಕೇಂದ್ರದ ಮಾದರಿಯಲ್ಲಿರುತ್ತದೆ ಎಂದು ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಿಂಗರಾಜಯ್ಯ ಹೇಳುತ್ತಾರೆ.

ಕಸದ ಸಮಸ್ಯೆ ಹೆಚ್ಚಳವಾಗಿದ್ದು ಏಕೆ?: ರಿಂಗ್‌ರಸ್ತೆಗೆ ಹೊಂದಿಕೊಂಡಂತೆ ಹಲವು ಬಡಾವಣೆಗಳು ಸ್ಥಾಪನೆಗೊಂಡಿವೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸುಮಾರು 70 ಖಾಸಗಿ ಬಡಾವಣೆಗಳಿಗೆ ಇಲ್ಲಿ ಒಪ್ಪಿಗೆ ಸೂಚಿಸಿದೆ. ಹಲವೆಡೆ ಮನೆಗಳನ್ನು ಕಟ್ಟಿ ಜನರು ವಾಸವಿದ್ದಾರೆ. ಇವೆಲ್ಲವೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಪಾಲಿಕೆ ಕಸವನ್ನು ಸಂಗ್ರಹಿಸುವುದಿಲ್ಲ. ಸ್ಥಳೀಯ ಪಂಚಾಯಿತಿಗೆ ಇದು ಭಾರಿ ಹೊರೆಯಾಗಿ ಪರಿಣಮಿಸಿದೆ.

ಇಲ್ಲಿನ ಜನರಿಂದ ಕಸವನ್ನು ಸಂಗ್ರಹಿಸುವುದಕ್ಕೆ ಪೌರಕಾರ್ಮಿಕರು ಬರುವುದಿಲ್ಲ. ಜನರು ಕಸವನ್ನು ನಿಗದಿತ ಪ್ರದೇಶಗಳಲ್ಲಿ ಇಟ್ಟಿರುವ ಕಂಟೇನರ್‌ಗಳಿಗೆ ಹಾಕಬೇಕು. ಕಂಟೇನರ್‌ಗಳಲ್ಲಿನ ಕಸವನ್ನು ಪಂಚಾಯಿತಿಯ ಪೌರಕಾರ್ಮಿಕರು ಸ್ಥಳೀಯವಾಗಿ ಇರುವ ಖಾಲಿ ಪ್ರದೇಶಗಳಲ್ಲಿ ವಿಲೇವಾರಿ ಮಾಡುತ್ತಾರೆ. ಇದರಿಂದ ನಗರದ ಹೊರವಲಯ ಗಬ್ಬು ನಾರುವಂತಾಗಿದೆ.

ಇದೀಗ ತಾಲ್ಲೂಕು ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಬರುವ 37 ಗ್ರಾಮ ಪಂಚಾಯಿತಿಗಳಲ್ಲಿ ಕಸದ ಸಮಸ್ಯೆಗೆ ಮುಕ್ತಿ ಹಾಡಲು ನಿರ್ಧರಿಸಿದೆ. ಪ್ರಾಥಮಿಕ ಹಂತದಲ್ಲಿ ಒಟ್ಟು 15 ಕಡೆ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ನಿರ್ಧರಿಸಿದೆ. ಇವುಗಳಲ್ಲಿ 7 ಕಡೆ ತುರ್ತಾಗಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಿದೆ.

ಎಲ್ಲೆಲ್ಲಿ?:ಹೊಸಹುಂಡಿ, ಶ್ರೀರಾಂಪುರ, ಆಲನಹಳ್ಳಿ, ಹಿನಕಲ್, ಕೂರ್ಗಳ್ಳಿ, ಸಿದ್ಧಲಿಂಗಪುರ ಹಾಗೂ ಬೋಗಾದಿಗಳಲ್ಲಿ ಘಟಕಗಳನ್ನು ತೆರೆಯಲೇಬೇಕಾದ ಜರೂರು ಇದೆ. ಇವುಗಳಲ್ಲಿ ಕೆಲವೆಡೆ ಜಾಗದ ಸಮಸ್ಯೆ ತಲೆದೋರಿದೆ. ಇಲ್ಲೆಲ್ಲ ಭೂಮಿಯ ಮೌಲ್ಯ ನಾಗಾಲೋಟದಲ್ಲಿ ಹೆಚ್ಚಾಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಜಾಗ ಪಡೆಯುವ ಸ್ಥಿತಿಯಲ್ಲಿ ಪಂಚಾಯಿತಿ ಇಲ್ಲ. ಇದು ಸದ್ಯದ ತೊಡಕಾಗಿದೆ. ಇಲ್ಲಿ ಸರ್ಕಾರಿ ಜಾಗಗಳನ್ನೇ ಹುಡುಕಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.