ADVERTISEMENT

ಎಚ್.ಡಿ.ಕೋಟೆ ಕ್ಷೇತ್ರದಿಂದ ಎಂ.ಸಿ. ದೊಡ್ಡನಾಯಕಗೆ ಟಿಕೆಟ್‌ ಕೊಡಿ: ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:40 IST
Last Updated 1 ಫೆಬ್ರುವರಿ 2023, 5:40 IST
ಸರಗೂರು ಹ್ಯಾಂಡ್ ಪೋಸ್ಟ್‌ನ ತಿಮ್ಮೇಗೌಡರ ತೋಟದಲ್ಲಿ ನಡೆದ ಸ್ವಾಭಿಮಾನಿ ಕಾಂಗ್ರೆಸ್ ಸಭೆಯಲ್ಲಿ ಎಂ.ಸಿ.ದೊಡ್ಡನಾಯಕ ಮಾತನಾಡಿದರು
ಸರಗೂರು ಹ್ಯಾಂಡ್ ಪೋಸ್ಟ್‌ನ ತಿಮ್ಮೇಗೌಡರ ತೋಟದಲ್ಲಿ ನಡೆದ ಸ್ವಾಭಿಮಾನಿ ಕಾಂಗ್ರೆಸ್ ಸಭೆಯಲ್ಲಿ ಎಂ.ಸಿ.ದೊಡ್ಡನಾಯಕ ಮಾತನಾಡಿದರು   

ಸರಗೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಮುಖಂಡ ಎಂ.ಸಿ. ದೊಡ್ಡನಾಯಕ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್‌ ನೀಡಬೇಕು’ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು.

ಹ್ಯಾಂಡ್ ಪೋಸ್ಟ್ ಎಪಿಎಂಸಿ ಬಳಿ ಇರುವ ಕಾಂಗ್ರೆಸ್‌ ಮುಖಂಡ ತಿಮ್ಮೇಗೌಡ ಅವರ ತೋಟದ ಮನೆ ಯಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.

ಕಾಂಗ್ರೆಸ್‌ ಮುಖಂಡ ಎಚ್.ಸಿ.ಶಿವಣ್ಣ ಮಾತನಾಡಿ, ‘ಶಾಸಕ ಅನಿಲ್ ಚಿಕ್ಕಮಾದು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೊರಗಿನಿಂದ ಪಕ್ಷಕ್ಕೆ ಬಂದವರಿಗೆ ಮನ್ನಣೆ ನೀಡುತ್ತಿದ್ದಾರೆ. ನಾವು ಶಾಸಕರ ಗೆಲುವಿಗೆ ಶಕ್ತಿಮೀರಿ ಶ್ರಮಿಸಿದ್ದೇವೆ. ಅದನ್ನು ಪರಿಗಣಿಸದೇ ಹೊರಗಿನವರ ಮಾತು ಕೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಸ್ಥಳೀಯರಿಗೆ ಟಿಕೆಟ್ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕ್ಷೇತ್ರದಲ್ಲಿ ಎಂ.ಸಿ.ದೊಡ್ಡನಾಯಕ ಅವರ ನೇತೃತ್ವದಲ್ಲಿ ಎರಡು– ಮೂರು ಚುನಾವಣೆ ಎದುರಿಸಿದ್ದು, ಗೆಲುವೂ ಸಾಧಿಸಲಾಗಿದೆ. ಕ್ಷೇತ್ರದಲ್ಲಿ ಎಲ್ಲ ಜನಾಂಗದವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರದ ಮಣ್ಣಿನ ಮಗನಲ್ಲ. ಹೀಗಾಗಿ ದತ್ತು ಅಭ್ಯರ್ಥಿಗೆ ಅವಕಾಶ ನೀಡದೇ ಕ್ಷೇತ್ರದ ಮಣ್ಣಿನ ಮಗನಾದ ಎಂ.ಸಿ.ದೊಡ್ಡನಾಯಕ ಅವರಿಗೆ ಮನ್ನಣೆ ನೀಡಬೇಕು’ ಎಂದರು.

‘ಮುಂದಿನ ದಿನಗಳಲ್ಲಿ ಸಮಾವೇಶ ಹಮ್ಮಿಕೊಂಡು ಎಂ.ಸಿ.ದೊಡ್ಡನಾಯಕ ಅವರ ಬಲ ಪ್ರದರ್ಶಿಸ
ಲಾಗುವುದು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿಗೆ ನಿಯೋಗ ಹೋಗಿ ಟಿಕೆಟ್ ನೀಡುವಂತೆ ಬೇಡಿಕೆ ಇಡಲಾಗುವುದು. ನಿಯೋಗ ದೆಹಲಿಗೂ ಹೋಗಲಿದೆ’ ಎಂದು ಅವರು ತಿಳಿಸಿದರು.

ಟಿಕೆಟ್ ಆಕಾಂಕ್ಷಿ ಎಂ.ಸಿ.ದೊಡ್ಡನಾಯಕ ಮಾತನಾಡಿ, ‘ಹಿಂದಿನ ಚುನಾವಣೆಯಲ್ಲಿ ನನಗೆ ಅವಕಾಶ ನೀಡುವಂತೆ ಆರ್.ಧ್ರುವನಾರಾಯಣ ಅವರಿಗೆ ಮನವಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಅವರು ಹೇಳಿದರು. ಈಗ ಪಕ್ಷ ನನಗೆ ಟಿಕೆಟ್ ನೀಡಿದಿದ್ದರೆ ಮುಂದಿನ ದಿನಗಳಲ್ಲಿ ದಿಟ್ಟ ನಿಲುವು ತೆಗೆದು ಕೊಳ್ಳಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಡ್ಡಹಳ್ಳಿ ನಂದಕುಮಾರ್, ಮುಖಂಡರಾದ ಕೃಷ್ಣೇಗೌಡ, ಇಬ್ರಾಹಿಂ, ಸುಭಾಷ್, ಪುರದಕಟ್ಟೆ ಬಸವರಾಜು, ಸಿದ್ದರಾಜು, ತಿಮ್ಮೇಗೌಡ, ರಾಮು, ಸೋಮನಾಯಕ, ನಾಗರಾಜಪ್ಪ, ಮಹದೇವ್, ಗೋವಿಂದರಾಜು, ಎಚ್.ಎಂ.ಬಸವೇಗೌಡ, ಮರಿತಿಮ್ಮನಾಯಕ, ಇಸ್ಮಾಯಿಲ್, ಗಣೇಶ, ಸೋಮ ನಾಯಕ, ಬೆಟ್ಟನಾಯಕ, ಕಾಳಿಂಗನಾಯಕ, ಶಿವಯ್ಯ, ಮರಿಯಪ್ಪ, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.