ADVERTISEMENT

ರಾಜ್ಯಪಾಲರು ಭಾಷಣ ಬದಲಾಯಿಸುವ ಸಾಧ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 9:55 IST
Last Updated 25 ಜನವರಿ 2026, 9:55 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

-ಪ್ರಜಾವಾಣಿ ಚಿತ್ರ

ಮೈಸೂರು: ‘ಸರ್ಕಾರ ಕೊಡುವ ಭಾಷಣವನ್ನು ರಾಜ್ಯಪಾಲರು ಬದಲಾಯಿಸುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿಧಾನಮಂಡಲದ ಅಧಿವೇಶನದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ವರದಿ ಕೊಡಲಿ ಬಿಡಿ. ಬೇಡ ಎಂದವರಾರು? ನಮ್ಮ ಕಡೆಯಿಂದ ವಿವರಣೆ ಏನೂ ಇಲ್ಲ’ ಎಂದರು.

‘ಅಧಿವೇಶನದಲ್ಲಿ ಏನು ನಡೆಯಿತೆಂದು ಅವರು ರಾಷ್ಟ್ರಪತಿಯವರಿಗೆ ತಿಳಿಸಿದ್ದಾರಷ್ಟೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕೆಂದು ಸಂವಿಧಾನದ 176 ಮತ್ತು 163 ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಹೇಳಿದೆ. ಸರ್ಕಾರ ನೀಡಿರುವ ಭಾಷಣವನ್ನು ಅವರು ಓದಲೇಬೇಕಾಗಿತ್ತು’ ಎಂದು ಹೇಳಿದರು.

‘ಗಣರಾಜ್ಯೋತ್ಸವಕ್ಕೂ ನಾವು ಭಾಷಣ ಬರೆದುಕೊಡುತ್ತೇವೆ. ಆದರೆ, ಓದುವವರು ಅವರೇ ಅಲ್ಲವೇ? ಜಂಟಿ ಅಧಿವೇಶನದಲ್ಲಿ ನಾವು ಏನು ಬರೆದುಕೊಡುತ್ತೇವೆಯೋ ಅದನ್ನು ಅವರು ಓದಲೇಬೇಕು. ಗಣರಾಜ್ಯೋತ್ಸವದಲ್ಲೂ ನಾವು ಬರೆದುಕೊಡುತ್ತೇವೆ, ಅವರು ಬದಲಾಯಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ನಾವು ಪತ್ರ ವ್ಯವಹಾರವನ್ನೆಲ್ಲಾ ನಡೆಸಿದ್ದೇವೆ. ಆದರೂ ಆಯ್ಕೆ ಮಾಡದಿದ್ದರೆ ಏನು ಮಾಡುವುದು? ಪ್ರತಿ ರಾಜ್ಯದಿಂದ ಒಂದನ್ನು ಆಯ್ಕೆ ಮಾಡುವುದು ಕೇಂದ್ರ ಸರ್ಕಾರವಲ್ಲವೇ? ಎಂದು ಕೇಳಿದರು.

ಫೆಬ್ರುವರಿಯಿಂದ ಬಜೆಟ್ ಸಭೆ...

‘ಬಜೆಟ್‌ ಸಿದ್ಧತಾ ಸಭೆಯನ್ನು ಇನ್ನೂ ಅರಂಭಿಸಿಲ್ಲ. ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದ್ದೇನೆ. ಫೆ.2ರಿಂದ ಕಟ್ಟುನಿಟ್ಟಾಗಿ ಆರಂಭಿಸಲಿದ್ದೇವೆ’ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ ಹೂಡಿಕೆಗೆ ಸದಾ ಒಳ್ಳೆಯ ವಾತಾವರಣವಿದೆ. ನಮ್ಮಲ್ಲಿ ಕೌಶಲವುಳ್ಳ ಹಾಗೂ ಕೌಶಲ ಇಲ್ಲದ ಮಾನವ ಸಂಪನ್ಮೂಲ ಸಾಕಷ್ಟು ಲಭ್ಯವಿದೆ. ಕೌಶಲ ವೃದ್ಧಿಗಾಗಿ ನಾವು ತರಬೇತಿಯನ್ನೂ ನೀಡುತ್ತಿದ್ದೇವೆ. ಹೀಗೆ ತರಬೇತಿ ಪಡೆದವರಿಗೆ ಶೇ ನೂರರಷ್ಟು ಕೆಲಸ ಸಿಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.