ADVERTISEMENT

ಸಹಕಾರಿ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಅಸಹಕಾರ: ಸಚಿವ ರಾಜಣ್ಣ ಅಸಮಾಧಾನ

ದೇವರಾಜ ಅರಸು ಪುತ್ಥಳಿಗೆ ಗೌರವ ನಮನ: ಸಚಿವ ರಾಜಣ್ಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:11 IST
Last Updated 19 ಮೇ 2025, 14:11 IST
ಹುಣಸೂರು ನಗರದ ಹೊರ ವಲಯದಲ್ಲಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಪುತ್ಥಳಿಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಮ್ಮ 75 ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಅರ್ಪಿಸಿ ಸ್ಮರಿಸಿದರು.
ಹುಣಸೂರು ನಗರದ ಹೊರ ವಲಯದಲ್ಲಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಪುತ್ಥಳಿಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಮ್ಮ 75 ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಅರ್ಪಿಸಿ ಸ್ಮರಿಸಿದರು.   

ಹುಣಸೂರು: ‘ರಾಜ್ಯ ಸಹಕಾರ ಕಾಯ್ದೆ 1959 ತಿದ್ದುಪಡಿ ಬಿಲ್‌ ರಾಷ್ಟ್ರಪತಿಗಳಿಗೆ ಕಳುಹಿಸಲು ರಾಜ್ಯಪಾಲರು ಸೂಚಿಸಿರುವುದು ನಿಯಮ ಬಾಹಿರ’ ಎಂದು ರಾಜ್ಯ ಸಹಕಾರಿ ಸಚಿವ ಕೆ.ಎನ್.‌ ರಾಜಣ್ಣ ಅಸಮಾಧಾನ ಹೊರ ಹಾಕಿದರು.

ಅರಸು ಅವರ 75ನೇ ಜನ್ಮದಿನದ ಆಚರಣೆ ನಿಮಿತ್ತ ಸೋಮವಾರ ತಾಲ್ಲೂಕಿನ ಕಲ್ಲಹಳ್ಳಿಗೆ ಭೇಟಿ ನೀಡಿ ದೇವರಾಜ ಅರಸು ಅವರಿಗೆ ನಮನ ಸಲ್ಲಿಸಿ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಹಕಾರಿ ಕ್ಷೇತ್ರದಲ್ಲಿ ಆಂದೋಲನ ಆಗಬೇಕು ಎಂಬ ಉದ್ದೇಶದಿಂದ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸಹಕಾರಿ ಬಿಲ್‌ 1959 ಮಂಡಿಸಿ ಸಮಗ್ರ ಚರ್ಚೆ ನಡೆಸಿದ ಬಳಿಕ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ರಾಜ್ಯಪಾಲರು ಮಸೂದೆ ಕುರಿತಾಗಿ 2-3 ಬಾರಿ ವಾಪಸ್‌ ಕಳುಹಿಸಿ ಸ್ಪಷ್ಟನೆ ಕೋರಿದ್ದರು. ಅವರು ಕೇಳಿದ ಸ್ಪಷ್ಟನೆಯನ್ನು ನಿಯಮಾನುಸಾರ ನೀಡಲಾಗಿತ್ತು. ಇದೀಗ ರಾಜ್ಯಪಾಲರು ಮೂರು ದಿನದ ಹಿಂದೆ ರಾಷ್ಟ್ರಪತಿಗಳಿಗೆ ರವಾನಿಸಲು ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರುವ ಉದ್ದೇಶದಿಂದ ಈ ಬಿಲ್ ಮಂಡಿಸಿ ತಿದ್ದುಪಡಿ ಮಾಡುವ ಉದ್ದೇಶ ಹೊಂದಿದ್ದೇವೆಯೇ ಹೊರತು ಯಾವುದೇ ಸ್ವಾರ್ಥ ಇರಲಿಲ್ಲ. ಹೀಗಿದ್ದರೂ ರಾಜ್ಯಪಾಲರು ಬಿಲ್‌ ರಾಷ್ಟ್ರಪತಿ ಅಂಗಳಕ್ಕೆ ರವಾನಿಸಿರುವುದು ಬೇಸರ ತರಿಸಿದೆ’ ಎಂದು ಹೇಳಿದರು.

ADVERTISEMENT

‘ತಿದ್ದುಪಡಿ ಮಾಡಿರುವ ಬಿಲ್‌ನಲ್ಲಿ ಸರ್ಕಾರದಿಂದ ಅನುಕೂಲ ಪಡೆಯಲಿರುವ ಎಸ್ಸಿ ಮತ್ತು ಎಸ್ಟಿ ಯುವಕರಿಗೆ, ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕು ಕಲ್ಪಿಸಿ ನಾಮ ನಿರ್ದೇಶನ ಸದಸ್ಯರಿಗೂ ಆಡಳಿತದಲ್ಲಿ ತಮ್ಮ ಸಲಹೆ ಸೂಚನೆ ನೀಡಿ ಸಹಕಾರಿ ಸಂಘ ಅಭಿವೃದ್ಧಿಪಡಿಸುವ ಅವಕಾಶ ಕಲ್ಪಿಸಲಾಗಿದೆ. ಈಗಿನ ನಿಯಮದಲ್ಲಿ ನಾಮ ನಿರ್ದೇಶನ ಸದಸ್ಯರಿಗೆ ಯಾವುದೇ ಅಧಿಕಾರವಿಲ್ಲ. ಅವರು ನೆಪಮಾತ್ರಕ್ಕೆ ಸಭೆಯಲ್ಲಿ ಭಾಗವಹಿಸಿ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ನಾಮ ನಿರ್ದೇಶರು ಇದ್ದು ಇಲ್ಲದಂತೆ’ ಎಂದರು.

ಹುಣಸೂರಿನ ಮಹಾಭೋದಿ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಿಗದಿಯಾಗಿದ್ದ ಚುನಾವಣಾಧಿಕಾರಿ ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದ ಬಗ್ಗೆ ಪ್ರಶ್ನೆಗೆ, ‘ಈ ರೀತಿ ಪ್ರಕರಣಗಳು ರಾಜ್ಯದಲ್ಲಿ 20 ಸ್ಥಳದಲ್ಲಿ ನಡೆದಿರುವ ವರದಿ ಬಂದಿದ್ದು, ಈಗಾಗಲೇ ಪ್ರತ್ಯೇಕ ತನಿಖೆ ನಡೆಸಿ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಲು ಸಚಿವಾಲಯ ಬದ್ಧವಿದೆ. ಕೆಲವೊಂದು ಪ್ರಕರಣದಲ್ಲಿ ಚುನಾವಣಾಧಿಕಾರಿಗೆ ಸೇವೆಯಿಂದ ಅಮಾನತ್ತುಗೊಳಿಸಿದ ಘಟನೆಗಳು ಇದ್ದು ಹುಣಸೂರಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಚುನಾವಣೆ ನಡೆಸಲು ಕ್ರಮವಹಿಸುತ್ತೇನೆ’ ಎಂದರು.

ಸಚಿವರ ಭೇಟಿ ಸಮಯದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌, ಹುಡಾ ಅಧ್ಯಕ್ಷ ಎಚ್.ಪಿ.ಅಮರನಾಥ್‌, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಪುಟ್ಟರಾಜ್‌, ಚಿಕ್ಕಸ್ವಾಮಿ, ಮಯೂರ, ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಬಾರಿ ಸ್ಪರ್ಧಿಸಲ್ಲ: ರಾಜಣ್ಣ

‘ರಾಜ್ಯ ರಾಜಕಾರಣದಲ್ಲಿ ಹೊಸ ಮುಖಗಳ ಆಗಮನದ ಅವಶ್ಯಕವಿದ್ದು ಹಿರಿಯ ರಾಜಕಾರಣಿಗಳು ಅರಿತು ರಾಜಕೀಯ ನಿವೃತ್ತಿ ಪಡೆದು ಯುವ ರಾಜಕಾರಣಿಗಳಿಗೆ ಅವಕಾಶ ನೀಡಬೇಕಾಗಿದೆ. ಈ ದೃಷ್ಟಿಯಿಂದ 45 ವರ್ಷಗಳಿಂದ ಸಕ್ರಿಯ ರಾಜಕಾರಣಿಯಾಗಿದ್ದು ಮುಂದಿನ ಸಾರ್ವಜನಿಕ ಚುನಾವಣೆಯಿಂದ ಹೊರಗುಳಿದು ಕ್ಷೇತ್ರದಲ್ಲಿ ಹೊಸ ಪ್ರತಿಭೆಗೆ ಅವಕಾಶ ಕಲ್ಪಿಸಲು ಬದ್ಧ’ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.