ADVERTISEMENT

ಕೊಲ್ಲಿ ದೇಶಗಳಿಂದ ಭಾರತ ಪಾಠ ಕಲಿಯಬೇಕಾಯಿತಲ್ಲ: ವಿಶ್ವನಾಥ್ ವಿಷಾದ

ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ವಾಗ್ದಾಳಿ * ಹಳೇ ಪಠ್ಯಕ್ರಮ ಉಳಿಸಿಕೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 16:01 IST
Last Updated 7 ಜೂನ್ 2022, 16:01 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ‘ರಾಜಪ್ರಭುತ್ವದ ಕೊಲ್ಲಿ ರಾಷ್ಟ್ರಗಳಿಂದ ಜನತಂತ್ರದ ಭಾರತವು ಪಾಠ ಹೇಳಿಸಿಕೊಳ್ಳಬೇಕಾಗಿರುವುದು ಶೋಭಾಯಮಾನವಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು.

‘ಕೊಲ್ಲಿ ರಾಷ್ಟ್ರಗಳಲ್ಲಿ 25 ಲಕ್ಷ ಭಾರತೀಯ ಕುಟುಂಬಗಳು ಬೆವರು ಹರಿಸಿ ದುಡಿದ ಹಣವನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ನಾಚಿಕೆಯಾಗುವುದಿಲ್ಲವೇ’ ಎಂದುಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪ್ರಕ್ಷುಬ್ದತೆಯ ಮಧ್ಯೆ ಸೌಹಾರ್ದ ಮಾತನ್ನಾಡಿರುವ ಮೋಹನ್‌ ಭಾಗವತ್‌ ನಿಲುವನ್ನು ಪ್ರತಾಪಸಿಂಹ, ಕಟೀಲ್‌, ಸಂತೋಷ್‌ ಜೀ, ಸಿ.ಟಿ.ರವಿ ಸ್ವಾಗತಿಸಿ ಇನ್ನೂ ಹೇಳಿಕೆ ನೀಡಿಲ್ಲವೇಕೆ. ಭಾಗವತರು ಹೇಳಿದಂತೆ ಯಕ್ಷಗಾನ ನಡೆಯಬೇಕು. ಆದರೆ, ಆರ್‌ಎಸ್‌ಎಸ್‌, ಬಿಜೆಪಿಯವರು ಮಿತಿಯ ಗೆರೆಯನ್ನು ಮೀರಿ ಕುಣಿಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮಸೀದಿಗಳಲ್ಲಿ ಶಿವಲಿಂಗ ಹುಡುಕಿ ದೇಶದ ಅಖಂಡತೆಗೆ ಧಕ್ಕೆ ತರಬಾರದು. ಮುಸ್ಲಿಮರು ಸೋದರರು, ನಮ್ಮ ಪೂರ್ವಿಕರೆಂದು ಭಾಗವತರು ಹೇಳಿಕೆ ನೀಡಿದ್ದಾರೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಗೋಷ್ಠಿ ನಡೆಸಿ ಅವರ ಮಾತನ್ನು ತಲುಪಿಸಲಿ’ ಎಂದು ಸಲಹೆ ನೀಡಿದರು.

ಪಠ್ಯ ಪರಿಷ್ಕರಣೆ ಜನರಿಗೊಪ್ಪಿಸಬೇಕಿತ್ತು: ‘ಪಠ್ಯ ಪರಿಷ್ಕರಣೆಯನ್ನು ಜನರಿಗೆ, ಸಂವಿಧಾನದ ಹುದ್ದೆಗಳಲ್ಲಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ಅಥವಾ ಶಿಕ್ಷಕರಿಗೆ ಒಪ್ಪಿಸಬೇಕಿತ್ತು.ಆರ್‌ಎಸ್‌ಎಸ್‌ಗೆ ಒಪ್ಪಿಸುವುದಲ್ಲ. ಡೊನೇಷನ್‌ ಗಿರಾಕಿಗಳಾದ ಸ್ವಾಮಿಗಳನ್ನು ಮೆಚ್ಚಿಸುವುದಕ್ಕಲ್ಲ ನೀವಿರುವುದು’ ಎಂದು ಪ‍್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿರುದ್ಧ ಹರಿಹಾಯ್ದರು.

‘ಅಂಬೇಡ್ಕರ್‌, ಬಸವಣ್ಣ, ಕನಕದಾಸ, ನಾರಾಯಣ ಗುರು ಎಲ್ಲರನ್ನೂ ಅವಮಾನಿಸಲಾಗಿದೆ. ಮಹಿಳಾ, ದಲಿತ ಸಾಹಿತಿಗಳಪಠ್ಯವೇ ಇಲ್ಲ. ಪಠ್ಯ ಪರಿಷ್ಕರಣೆ ಪ್ರಜಾಸತ್ತಾತ್ಮಕವಾಗಿ ನಡೆದಿಲ್ಲ. ಅಂಬೇಡ್ಕರ್‌ ಸಂವಿಧಾನ ಕರಡು ಸಮಿತಿಯ ನೇತೃತ್ವ ವಹಿಸಿದ್ದರಿಂದಲೇ ಅವರು ಸಂವಿಧಾನ ಶಿಲ್ಪಿಯಾಗಿದ್ದಾರೆ. ಆದರೆ, ಬಿ.ಎನ್‌.ರಾವ್‌ ಅವರನ್ನು ವೈಭವೀಕರಿಸಿ ಬಾಬಾ ಸಾಹೇಬರನ್ನು ಗೇಲಿ ಮಾಡಿದ್ದೀರಾ. ರೋಹಿತ್‌ ಚಕ್ರತೀರ್ಥ ಎಲ್ಲಿದ್ದೀರಪ್ಪ ನೀವೆಲ್ಲ, ಛೀ..’ ಎಂದು ಗುಡುಗಿದರು.

‘ಪರಿಷ್ಕರಣೆಗೆ ವೆಚ್ಚ ಮಾಡಿರುವ ₹ 35 ಕೋಟಿ ಹೋದರೆ ಹೋಗಲಿ. ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರನ್ನೂ ಒಳಗೊಂಡ ಸಮಿತಿ ರಚಿಸಿ ಪರಿಷ್ಕರಣೆ ನಡೆಸಲಿ. ಮುಖ್ಯಮಂತ್ರಿ, ಶಿಕ್ಷಣ ಸಚಿವರ ಅಪ್ರಜಾಸತ್ತಾತ್ಮಕ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಹಳೆಯ ಪಠ್ಯವನ್ನೇ ಮುಂದುವರಿಸಬೇಕು’ ಎಂದರು.

ದುರಹಂಕಾರ ಸುಡಿ: ‘ಚೆಡ್ಡಿ ಸುಡುವ ಬದಲು ದುರಂಹಕಾರವನ್ನು ಸುಡಬೇಕು. ಅಹಂನಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು’ ಎಂದು ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಗುರಿಯಾಗಿಸಿ ವಿಶ್ವನಾಥ್‌ ಟೀಕಿಸಿದರು.

‘ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಮೂರು ಪಕ್ಷಗಳು ಹಾಳು ಮಾಡಿವೆ. ಮತದಾರರಿಗೆ ಮದ್ಯ ಕುಡಿಸಲು, ಹಣ ಹಂಚಲು ಸ್ಪರ್ಧೆಗಿಳಿದಿವೆ. ಪದವೀಧರರೂ ಹಣಕ್ಕಾಗಿ ಮತ ಮಾರಲು ಸಿದ್ಧವಾಗಿದ್ದಾರೆ. ಚುನಾವಣಾ ಆಯೋಗವು ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ತಡೆಯೊಡ್ಡಬೇಕು’ ಎಂದರು. ಮುಖಂಡ ರೇವಣ್ಣ ಇದ್ದರು.

‘ಚಡ್ಡಿ ಸುಡಬಹುದು; ವಿಚಾರಧಾರೆ ಅಲ್ಲ’
ಹಾಸನ:
‘ಕಾಂಗ್ರೆಸ್ಸಿಗರು ಚಡ್ಡಿಗಳನ್ನು ಸುಡಬಹುದು. ಆದರೆ ನಮ್ಮ ತತ್ವ ಸಿದ್ಧಾಂತ, ವಿಚಾರಧಾರೆಗಳನ್ನು ಸುಡಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಪಾದಿಸಿದರು.

ಬೇಲೂರು ತಾಲ್ಲೂಕಿನ ರಣಘಟ್ಟ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವ ಕಾಂಗ್ರೆಸ್ಸಿಗರು ಚಡ್ಡಿ ಸುಡುತ್ತೇವೆನ್ನುತ್ತಿದ್ದಾರೆ. ಕಾಂಗ್ರೆಸ್ ಕಚೇರಿಗೆ ಈಗಾಗಲೇ ಚಡ್ಡಿಗಳನ್ನು ಕಳುಹಿಸಲಾಗುತ್ತಿದೆ’ ಎಂದರು.

*
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ನಾಗರಿಕನಾಗಿ ಮಾತನಾಡುವುದನ್ನು ಬಿಟ್ಟು, ಪುಂಡ ಪೋಕರಿಯಂತೆ ಮಾತನಾಡುತ್ತಿದ್ದಾರೆ.
-ಜಗದೀಶ ಶೆಟ್ಟರ್‌, ಶಾಸಕ

*
ಆರ್‌ಎಸ್‌ಎಸ್ ಕಚೇರಿಗಳ ಮೇಲೆ ದಾಳಿ ಬೆದರಿಕೆಯ ಸಂದೇಶ ಬಂದಿದ್ದು, ರಾಜ್ಯದ ಸಂಘಟನೆಯ ಎಲ್ಲ ಕಚೇರಿಗಳಿಗೂ ರಕ್ಷಣೆ ಒದಗಿಸಲಾಗುವುದು.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.