ADVERTISEMENT

ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆಯಿಲ್ಲವೇ: ದೇವೇಗೌಡರಿಗೆ ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 11:01 IST
Last Updated 21 ಜನವರಿ 2022, 11:01 IST
   

ಮೈಸೂರು: ‘2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ನ್ಯಾಯ ಕೊಡಿಸುವಂತೆ ಕೋರಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗೆ ಮನವಿ ಮಾಡಿರುವುದು ಸರಿಯಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದರಿಂದಲೇ ಸುಪ್ರೀಂಕೋರ್ಟ್‌ ನೇಮಕಾತಿಯನ್ನು ರದ್ದುಗೊಳಿಸಿದೆ. 362 ಮಂದಿ ಈ ತೀರ್ಪಿನ ವಿರುದ್ಧ ಒಬ್ಬ ರಾಜಕಾರಣಿಗೆ ಮೇಲ್ಮನವಿ ಸಲ್ಲಿಸುತ್ತಾರೆ. ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅವರ ಪತ್ರ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸುವಂತೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ (ಸಿಎಸ್‌) ಸೂಚಿಸುತ್ತಾರೆ. ಈ ದೇಶದಲ್ಲಿ ನ್ಯಾಯ ವ್ಯವಸ್ಥೆ ಎಲ್ಲಿಗೆ ತಲುಪಿದೆ’ ಎಂದು ಪ್ರಶ್ನಿಸಿದರು.

‘ಬಸವರಾಜ ಬೊಮ್ಮಾಯಿ ಅವರೇ, ಇಂತಹ ಮನವಿಗಳಿಗೆ ಸೊಪ್ಪು ಹಾಕಬೇಡಿ. ನ್ಯಾಯಾಲಯದಲ್ಲಿ ರಾಜ್ಯಕ್ಕೆ ಮತ್ತೆ ಫಜೀತಿ ಎದುರಾಗಬಹುದು. ಅದಕ್ಕೆ ಅವಕಾಶ ನೀಡಬೇಡಿ. ಅಸಾಂವಿಧಾನಿಕವಾಗಿ ಅಯ್ಕೆಯಾದವರಿಗೆ ನ್ಯಾಯ ಒದಗಿಸಲು ಮುಂದಾದರೆ, ಅದು ಈ ರಾಜ್ಯಕ್ಕೆ ಮಾಡುವ ದ್ರೋಹ’ ಎಂದರು.

ADVERTISEMENT

‘ಪ್ರಧಾನಿ ಆಗಿದ್ದಂತಹ ದೇವೇಗೌಡ ಅವರ ಮೇಲೆ ನನಗೆ ಅಪಾರ ಗೌರವ ಇದೆ. ಆದರೆ ಅಸಾಂವಿಧಾನಿಕವಾಗಿ ಆಯ್ಕೆಯಾದವರ ಪರ ನಿಂತದ್ದು ಸರಿಯಲ್ಲ. ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆಯಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.