ADVERTISEMENT

ಎಚ್.ಡಿ.ಕೋಟೆ: ವಾರಾಹಿ, ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

ದೇಗುಲಕ್ಕೆ ಫಲ–ಪುಷ್ಪಗಳ ಅಲಂಕಾರ: ಕೊಂಡೋತ್ಸವಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:14 IST
Last Updated 30 ಜೂನ್ 2025, 13:14 IST
ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಹೂಗಳಿಂದ ದೇವರನ್ನು ಅಲಂಕರಿಸಲಾಗಿತ್ತು
ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಹೂಗಳಿಂದ ದೇವರನ್ನು ಅಲಂಕರಿಸಲಾಗಿತ್ತು   

ಎಚ್.ಡಿ.ಕೋಟೆ: ಗಣಪತಿ ಹೋಮ ಮತ್ತು ಪೂಜೆ ಮಾಡುವ ಮೂಲಕ ಪಟ್ಟಣದಲ್ಲಿರುವ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವಕ್ಕೆ ಅಧಿಕೃತವಾಗಿ ಸೋಮವಾರದಿಂದ ಚಾಲನೆ ನೀಡಲಾಯಿತು.

ಜಾತ್ರೆಯ ಅಂಗವಾಗಿ ದೇವಸ್ಥಾನದ ಸುತ್ತಲೂ ವಿವಿಧ ಫಲ–ಪುಷ್ಪಗಳಿಂದ ವಿಶೇಷವಾದ ಅಲಂಕಾರವನ್ನು ಮಾಡಿದ್ದು, ಬಾಳೆಕಂದು, ಮಾವಿನ ತೋರಣ, ರಂಗೋಲಿ ಸೇರಿದಂತೆ ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಪೂಜೆ ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದರು. ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು. ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಜಾತ್ರೆ ಈ ವರ್ಷ ನಡೆಯುತ್ತಿರುವುದು ಗ್ರಾಮದ ಜನತೆಯಲ್ಲಿ ಹರ್ಷ ಮತ್ತು ಸಂತೋಷವನ್ನುಂಟು ಮಾಡಿದೆ.

ADVERTISEMENT

ಜಾತ್ರೆಯ ಮಹೋತ್ಸವದ ಮೊದಲ ದಿನವಾದ ಸೋಮವಾರ ಮೈಸೂರು ಅರಮನೆ ತಂಪು ಹೆಸರಿನಲ್ಲಿ ನಡೆಯುವ ತಂಪು ಸೇವೆ ನೆರವೇರಿಸಲಾಯಿತು. ತಹಶೀಲ್ದಾರ್ ಅವರನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತಂದು ತಂಪು ಪೂಜೆಯನ್ನು ಸಂಜೆ ಮಾಡಲಾಯಿತು ಎಂದು ಪಟೇಲ್ ನಾಗರಾಜು ತಿಳಿಸಿದರು.

ಇಲ್ಲಿನ ಸಂಪ್ರದಾಯದಂತೆ ತಾರಕ ನದಿಯ ಬಳಿ ಮಾರಮ್ಮನವರ ಪತಿ ಎಂದು ಕರೆಯುವ ಫೋಟೋರಾಯ ಸ್ವಾಮಿಯನ್ನು ಪೂಜಿಸಿ ದೇವಸ್ಥಾನದ ಬಳಿಗೆ ತಂದು ಪ್ರತಿಷ್ಠಾಪಿಸಲಾಗುವುದು, ನಂತರ ಜಾತ್ರಾ ಮಹೋತ್ಸವಗಳು ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ವರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವವನ್ನು 9 ವರ್ಷಗಳ ನಂತರ ಅದ್ದೂರಿಯಾಗಿ ಆಚರಿಸಲು ಪಟ್ಟಣದ ಜನತೆ ಸಜ್ಜಾಗಿದ್ದಾರೆ.

ಜಾತ್ರೆಯು ಜುಲೈ 2ರವರೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜೆಗಳು ನಡೆಯಲಿವೆ. ಪಟ್ಟಣದ ಮನೆ ಮನೆಗಳು, ದೇಗುಲಗಳು ವಿದ್ಯುತ್ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ. ಕೊಂಡೋತ್ಸವಕ್ಕೆ ಕೊಂಡ ಸಜ್ಜುಗೊಳಿಸಲು ಕಗ್ಗಲಿ ಸೌದೆಯನ್ನು ಈಗಾಗಲೆ ಸಂಗ್ರಹಿಸಲಾಗಿದೆ.

ಮಂಗಳವಾರ ದಿನ ರಾತ್ರಿ 9 ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಜು. 2ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ.

ಪಟೇಲ್ ನಾಗರಾಜು, ಶಾನುಭೋಗ ಫಣೀಶ್, ಮುಖಂಡರಾದ ಎಂ.ಸಿ.ದೊಡ್ಡನಾಯಕ, ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಸೋಮು, ಶ್ರೀಕಾಂತ್, ಪ್ರಮೋದ್, ಸ್ಟುಡಿಯೋ ಪ್ರಕಾಶ್, ಕಂಪ್ಯೂಟರ್ ನಾಗರಾಜ್, ಚಂದ್ರ ಮೌಳಿ, ಶ್ರೀಕಂಠರಾಜ್, ಬಸವರಾಜ ಶೆಟ್ಟಿ, ಸುನಿಲ್ ಕುಮಾರ್, ಪ್ರಸಾದ್, ಸೋಮಸುಂದರ್ ಇದ್ದರು.

ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಪಟ್ಟಣದ ಮುಖಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.