ADVERTISEMENT

ಬೆದರಿಕೆಗೆ ಮಣಿಯದ ವೈದ್ಯಕೀಯ ಸಿಬ್ಬಂದಿ

ಸೋಮವಾರದಿಂದ ಕರ್ತವ್ಯಕ್ಕೆ ಬಾರದವರು ವಜಾ: ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:45 IST
Last Updated 27 ಸೆಪ್ಟೆಂಬರ್ 2020, 2:45 IST

ಮೈಸೂರು: ಕರ್ತವ್ಯಕ್ಕೆ ಹಾಜರಾಗ ದವರನ್ನು ವಜಾಗೊಳಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ನೀಡಿದ ಎಚ್ಚರಿಕೆಯ ಹೊರತಾಗಿಯೂ 927 ಗುತ್ತಿಗೆ ವೈದ್ಯಕೀಯ ನೌಕರರು ಶನಿವಾರವೂ ಮುಷ್ಕರ ಮುಂದುವರಿಸಿದ್ದಾರೆ. ಸತತ 3 ದಿನಗಳ ಮುಷ್ಕರದಿಂದ ಆರೋಗ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ.

ಕಾಯಂ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಎಲ್ಲ ಆರೋಗ್ಯ ಕಾರ್ಯಕ್ರಮಗಳ ದೈನಂದಿನ ವರದಿ ಸಲ್ಲಿಕೆ ಸ್ಥಗಿತಗೊಂಡಿದೆ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ರೋಗಿಗಳಿಗೆ ದೊರೆಯುತ್ತಿಲ್ಲ. ಇದರಿಂದ ಬಡವರು ಖಾಸಗಿ ಕ್ಲಿನಿಕ್‌ಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಮುಷ್ಕರ ನಿರತರ ಈ ಕ್ರಮ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಕೆರಳಿಸಿದೆ. ಸೆ.28ರಂದು ಕರ್ತವ್ಯಕ್ಕೆ ಗೈರಾದವರನ್ನು ಅಂದೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ರಾಜೇಶ್, ‘ಜಿಲ್ಲಾ ಆರೋಗ್ಯಾಧಿಕಾರಿ ಮಾತ್ರವಲ್ಲ ಜಿ.ಪಂ ಸಿಇಒ ಸಹ ನಮ್ಮನ್ನು ಬೆದರಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ನಾವೇನೂ ಲಕ್ಷಗಟ್ಟಲೆ ಸಂಬಳ ಕೊಡಿ ಎಂದು ಕೇಳುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿ, ಉದ್ಯೋಗ ಭದ್ರತೆ ನೀಡಿ ಎಂದು ಮನವಿ ಮಾಡುತ್ತಿದ್ದೇವೆ. ವೈದ್ಯಕೀಯ ಸೇವೆಗಳಿಗೆ ವ್ಯತ್ಯಯ ಉಂಟಾದರೂ ಸರ್ಕಾರ ಕನಿಷ್ಠ ಮಾತುಕತೆಗೂ ಕರೆದಿಲ್ಲ. ಭಾನುವಾರವೂ ನಮ್ಮ ಮುಷ್ಕರ ಮುಂದುವರಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.