ADVERTISEMENT

‘ಮಸಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು’

ಮುಂದುವರಿದ ಧ್ವಜ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 11:32 IST
Last Updated 7 ಆಗಸ್ಟ್ 2022, 11:32 IST
ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನದಲ್ಲಿ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಭಾನುವಾರ ಮುಂದುವರಿದ ಧ್ವಜ ಸತ್ಯಾಗ್ರಹದಲ್ಲಿ ಶ್ರಮ ದಾನ ಮಾಡಲಾಯಿತು
ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನದಲ್ಲಿ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಭಾನುವಾರ ಮುಂದುವರಿದ ಧ್ವಜ ಸತ್ಯಾಗ್ರಹದಲ್ಲಿ ಶ್ರಮ ದಾನ ಮಾಡಲಾಯಿತು   

ಮೈಸೂರು: ‘ಒಳ್ಳೆಯ ವಿಚಾರಗಳೊಂದಿಗೆ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಇಂದಿನ ಅಗತ್ಯವಾಗಿದೆ’ ಎಂದು ರಂಗಕರ್ಮಿ ‍ಪ್ರಸನ್ನ ಹೇಳಿದರು.

ಧ್ವಜ‌ ಸಂಹಿತೆಗೆ ತಿದ್ದುಪಡಿ ತಂದು ಕೃತಕ‌ ನೂಲು-ಪಾಲಿಸ್ಟರ್ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ‌ಬಿಜೆಪಿ‌ ಸರ್ಕಾರದ ಕ್ರಮ‌ ಖಂಡಿಸಿ‌ ನಗರದ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನದಲ್ಲಿ ಮುಂದುವರಿದ ಧ್ವಜ ಸತ್ಯಾಗ್ರಹದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಸುಲಭ ಸಂಸ್ಕೃತಿಗೆ ಮಾರು ಹೋಗಿ, ನಮ್ಮ ಶ್ರಮ ಸಂಸ್ಕೃತಿಯನ್ನು ಮರೆಯಬಾರದು. ಕೈಕೆಸರಾದರೆ ಬಾಯಿ ಮೊಸರಾಗುತ್ತದೆ. ಅದಕ್ಕೆ ಪೂರಕವಾಗಿ ಹೃದಯವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಆಶಯದ ಅನುಷ್ಠಾನದ ಸ್ವಚ್ಛ ಭಾರತ ನಮ್ಮದಾಗಬೇಕು. ಶ್ರಮಜೀವಿಗಳು ನಮ್ಮ ನಿಜವಾದ ನಾಯಕರು’ ಎಂದು ನುಡಿದರು.

ADVERTISEMENT

‘ನಮ್ಮನ್ನಾಳುವ ರಾಜಕಾರಣಿಗಳ ಮನಸ್ಸು ಶುದ್ಧವಿಲ್ಲದಿದ್ದರೆ, ಅವರ ವಿಚಾರಗಳು ಗಲೀಜಾಗಿರುತ್ತವೆ. ಇದರ ಪರಿಣಾಮವೇ ಇಂದು ಖಾದಿಗೆ ಆಪತ್ತು ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿದೇಶದಲ್ಲಿ ತಯಾರಾದ ರಾಷ್ಟ್ರಧ್ವಜಕ್ಕೆ ಮನ್ನಣೆ ನೀಡಿರುವುದು ಸರಿಯಲ್ಲ. ಶ್ರಮ ಸಂಸ್ಕೃತಿಯ ಭಾಗವಾದ ಖಾದಿಯನ್ನು ಉಳಿಸುವುದಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಆ.15ರವರೆಗೂ ಮುಂದುವರಿಯಲಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಲ್ಲಲ್ಲಿ ಸತ್ಯಾಗ್ರಹ ನಡೆಯುತ್ತಿದೆ’ ಎಂದು ತಿಳಿಸಿದರು.

‘ಇದು ನಮ್ಮ ದೇಶ, ನಮ್ಮ ಸಮಾಜ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಗರಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಕೆಲಸ ಎನ್ನುವುದು ಬಹುತೇಕರ ಮನೋಭಾವವಾಗಿದೆ. ಇದು ಸರಿಯಲ್ಲ. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಟ್ಟುಕೊಂಡು ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದಕ್ಕಾಗಿ ಶ್ರಮ ದಾನದಲ್ಲಿ ಯುವಜನರನ್ನು ತೊಡಗಿಸಿಕೊಳ್ಳಲಾಗುತ್ತಿದೆ’ ಎಂದರು.

ಸತ್ಯಾಗ್ರಹದ ಭಾಗವಾಗಿ, ಪ್ರಸನ್ನ ಮತ್ತು ‘ನಾಗರಿಕ ಸಮಿತಿ’ ಸಂಚಾಲಕ ಪ್ರೊ.ಕಾಳಚನ್ನೇಗೌಡ ನೇತೃತ್ವದಲ್ಲಿ ‌ಯುವಕ-ಯುವತಿಯರು ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ‘ಆಕ್ಟಿಂಗ್‌ ಶಾಸ್ತ್ರ’ ಲಲಿತಕಲಾ ಶಾಲೆಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು. ಬಳಿಕ ಪ್ರಾರ್ಥನಾ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.